ತಮ್ಮ ನಾಯಕತ್ವದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಹಿರಿಯ ನಾಯಕ ಬಸನಗೌಡ ಪಾಟೀಲ ಅವರನ್ನು ಪಕ್ಷದಿಂದ ಹೊರ ಹಾಕುತ್ತಿದ್ದಂತೆ ಏಕಾಏಕಿ ಕ್ರಿಯಾಶೀಲರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದೀಗ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟಕ್ಕೆ ತೀರ್ಮಾನಿಸಿದ್ದಾರೆ.
ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ಹಲವು ಅಕ್ರಮ ಆರೋಪಗಳ ವಿರುದ್ಧ ಜನಾಂದೋಲನ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಕ್ಷದ ಪದಾಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಲು ಮಾರಾಟದ ಹೆಚ್ಚಳ ಮತ್ತು ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಏಪ್ರಿಲ್ 2ರಂದು ಪಕ್ಷದ ಎಲ್ಲಾ ಶಾಸಕರು ಮತ್ತು ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋ ರಾತ್ರಿ ಧರಣಿ ನಡೆಸಲಿದ್ದೇವೆ ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಹೊಸದಾಗಿ ದರ ಏರಿಕೆಯ ಬರೆ ಹಾಕುತ್ತಿದೆ. ಈ ಹೆಚ್ಚಳಗೊಂಡಿರುವ ಆದೇಶ ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಇದರ ಜೊತೆಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಧರ್ಮ ದಾರಿತ ರಾಜಕಾರಣ ಮಾಡುತ್ತಿದೆ. ಸಂವಿಧಾನ ವಿರೋಧಿಯಾದ ಸರ್ಕಾರದ ಈ ನಿರ್ಧಾರ ವಿರೋಧಿಸಿ ಏಪ್ರಿಲ್ ನಾಲ್ಕರಂದು ಪಕ್ಷದ ಕಾರ್ಯಕರ್ತರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಮರುದಿನ ಎಲ್ಲ ಮಂಡಲಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜನರಿಗೆ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.
ಸಂವಿಧಾನ ವಿರೋಧಿಯಾದ ಸರ್ಕಾರದ ನಿರ್ಧಾರವನ್ನು ನಾವು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದೇವೆ ಸದನದಲ್ಲಿ ಈ ವಿಚಾರ ಚರ್ಚೆಗೆ ಬರಬಾರದು ಎಂದು ಸರ್ಕಾರ ಸಭಾಧ್ಯಕ್ಷರನ್ನು ಬಳಸಿಕೊಂಡು ನಮ್ಮ ಪಕ್ಷದ ಶಾಸಕರನ್ನು ಸದನದಿಂದ ಹೊರ ಹಾಕುವ ಕೆಲಸ ಮಾಡಿದೆ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಹಾಗೂ ವಿಧಾನಸೌಧದ ಮುಂಭಾಗದಲ್ಲಿ ಹೋರಾಟ ನಡೆಸಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.
ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಿರುವ ಕ್ರಮಕ್ಕೆ ನೋವು ವ್ಯಕ್ತಪಡಿಸಿದವರು. ಈ ನಿರ್ಧಾರ ಬೆಂಬಲಿಸಿ, ವಿಜಯೋತ್ಸವ ಆಚರಿಸುವುದನ್ನು ಎಂದಿಗೂ ಸಹಿಸುವುದಿಲ್ಲ. ಇಂತಹ ವಿಜಯೋತ್ಸವ ಆಚರಿಸಿದರೆ ನಾನು ಪಕ್ಷದ ಅಧ್ಯಕ್ಷನಾಗಿರಲು ನಾಲಾಯಕ್ ಎಂದು ಹೇಳಿದರು.
ನಾನು ಹಿಂದೊಂದು, ಮುಂದೊಂದು ಮಾತನಾಡುವ ವ್ಯಕ್ತಿಯಲ್ಲ. ಯಡಿಯೂರಪ್ಪ ಅನೇಕರನ್ನು ಬೆಳೆಸಿದ್ದಾರೆ. ಅವರು ತಮ್ಮ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಿಲ್ಲ. ರಾಜ್ಯಾಧ್ಯಕ್ಷನಾಗಿ ನನಗೆ ನನ್ನ ಕರ್ತವ್ಯದ ಅರಿವು ನನಗೂ ಇದೆ. ಎಲ್ಲವನ್ನೂ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಕೇಂದ್ರದ ವರಿಷ್ಠರು ಹಲವು ಬಾರಿ ಯತ್ನಾಳರಿಗೆ ನೋಟಿಸ್ ಕೊಟ್ಟು ಅವರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಪಕ್ಷದ ಮುಖಂಡರ ಜೊತೆ ಯತ್ನಾಳರನ್ನು ಭೇಟಿ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಸಣ್ಣಪುಟ್ಟ ಗೊಂದಲ ಸರಿಪಡಿಸಿಕೊಳ್ಳೋಣ ಎಂದಿದ್ದೆ. ಸದನ ಇದ್ದಾಗ ಭೋಜನಕೂಟಕ್ಕೂ ನಾನೇ ಆಹ್ವಾನಿಸಿದ್ದೆ ಎಂದು ಪ್ರಶ್ನೆಗೆ ಉತ್ತರಿಸಿದರು.