ಜಾಗತಿಕ ಮಟ್ಟದಲ್ಲಿ ಸರ್ವಾಧಿಕಾರ ಧೋರಣೆಯಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅಮೆರಿಕಾದ ಹನ್ ವೆಬರ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರೊ.ರಾಮಕೃಷ್ಣರೆಡ್ಡಿ ಆತಂಕ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ನಡೆದ ‘ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವವರನ್ನು ಅಧಿಕಾರದಿಂದ ಹೊರಗಿಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಸರ್ವಾಧಿಕಾರಿಗಳು ಆಡಳಿತ ನಡೆಸುವ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ. ಪ್ರಜೆಗಳು ಮುಕ್ತವಾಗಿ ಮಾತನಾಡಲು ಆಗದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಹೀಗಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾತನಾಡಲು ಜನರು ಹೆದರುತ್ತಾರೆ. ಹಾಗೆಯೇ ಸರ್ಕಾರದ ವಿರುದ್ಧ ಮಾತನಾಡುವವರನ್ನು ಜೈಲಿಗೆ ಅಟ್ಟಲಾಗುತ್ತದೆ. ಇಂಥ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಸ್ವತಂತ್ರರಾಗಿರುತ್ತಾರೆ. ಮುಕ್ತವಾಗಿ ಮಾತನಾಡಲು ಅವಕಾಶವಿರುತ್ತದೆ. ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದೆ ಎಂದರು.
ಗೂಂಡಾಗಳು ಸಮಾಜದಲ್ಲಿ ಭಯವನ್ನು ಹುಟ್ಟುಹಾಕುತ್ತಾರೆ. ಸರ್ವಾಧಿಕಾರಿಗಳು ಗೂಂಡಾಗಳಂತೆ ವರ್ತಿಸುತ್ತಾರೆ. ಇದು ಅಪಾಯ. ಇದಕ್ಕೆ ಉದಾಹರಣೆ ಹಿಟ್ಲರ್ ಮತ್ತು ಮುಸಲೋನಿ. ಅವರು ಸರ್ವಾಧಿಕಾರದ ಆಡಳಿತ ನಡೆಸಿದರು. ಸರ್ವಾಧಿಕಾರ ಸ್ವರೂಪದ ಆಡಳಿತದಲ್ಲಿ ಪತ್ರಿಕೆಗಳು ಮುದ್ರಣಗೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ ಎಂದು ಹೇಳಿದರು.
ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅನ್ಯಾಯ ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನೆ ಇದ್ದರೆ ನಾವು ಕೂಡ ಅದರ ಭಾಗವಾಗಿ ಬಿಡುತ್ತೇವೆ. ಹಾಗಾಗಿ ಅದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಜಿಪಿ ಕೆ.ಅರ್ಕೇಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಬಸವರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜು, ಜನಪರ ಚಿಂತಕ ಕೆ.ದೊರೈರಾಜ್, ಚರಕ ಆಸ್ಪತ್ರೆಯ ಡಾ.ಬಸವರಾಜು ಇದ್ದರು.