ರಾಜ್ಯದಲ್ಲಿ ಶೋಷಿತರ ಸಮಾವೇಶ ಮಾಡುವ ಸಂಬಂಧ ಈಗಾಗಲೇ ವರಿಷ್ಠರ ಗಮನಕ್ಕೂ ತರಲಾಗಿದೆ. ಸಮಾವೇಶವನ್ನು ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಹಕಾರ ಸಚಿವ ಹಾಗೂ ಸಿಎಂ ಆಪ್ತ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಮಾಡಿದರೂ ಎಲ್ಲರೂ ಸಮಾವೇಶಕ್ಕೆ ಬರಲು ಅನುಕೂಲವಾಗಲಿದೆ. ಶೋಷಿತರ ಸಮಾವೇಶವನ್ನು ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನದ ಬಳಿಕ ನಡೆಸುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ಒಪ್ಪಿಗೆ ಮೇರೆಗೆ ಈ ಸಮಾವೇಶ ನಡೆಸಲಾಗುವುದು. ಇದು ದಲಿತ ಸಿಎಂಗಾಗಿ ಮಾಡುತ್ತಿರುವ ಸಮಾವೇಶ ಅಲ್ಲ, ಶೋಷಿತರ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯುವುದಾಗಿ ಅಷ್ಟೇ.ಈ ಸಮಾವೇಶ ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ವಾಗಿದ್ದು, ಎಐಸಿಸಿ ಅಧ್ಯಕ್ಷರು, ರಾಹಲ್‌ಗಾಂಧಿ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ನಾಯಕರುಗಳನ್ನು ಆಹ್ವಾನಿಸಲಾಗುವುದು. ಬೇರೆ ಪಕ್ಷದವರಿಗೆ ಆಹ್ವಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ದಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಮಂತ್ರಿಗಿರಿಯನ್ನು ಬಿಡಲು ಸಿದ್ದ. ಈ ಮಾತನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ. ಬೇರೆಯವರ ಅಭಿಪ್ರಾಯ ಗೊತ್ತಿಲ್ಲ. ನಾನು ಕಳೆದ 3 ದಿನಗಳಿಂದ ದೆಹಲಿಯಲ್ಲೇ ಇದ್ದೆ. 2023ರ ಮೇ 18 ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ. ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ವರಿಷ್ಠರ ಭೇಟಿಯಾದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದೇನೆ. ಯಾವ ಲೋಕಸಭಾ ಚುನಾವಣೆ ಎಂಬುದನ್ನು ವರಿಷ್ಠರು ಸ್ಪಷ್ಟಪಡಿಸಬೇಕೆಂದು ಸಹ ಮನವಿ ಮಾಡಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಗಳಿಗೆ ಒಪ್ಪಂದ ಆಗಿದೆ ಎಂಬ ಬಗ್ಗೆ 2023ರ ಮೇ.18 ರಂದು ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖಿಸಿಲ್ಲ. 5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈಗಾಗಲೇ ನಮ್ಮ ಪಕ್ಷದ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಅವರು ಸಹ ಅದನ್ನೇ ಹೇಳಿದ್ದಾರೆ. ಹಾಗಾಗಿ ನಾನು ಸಹ ಅವರು ಮಾತನ್ನು ನಂಬಿದ್ದೇನೆ ಎಂದು ಹೇಳಿದರು.
ಮುಂದಿನ ಮಾರ್ಚ್ 17ಕ್ಕೆ ಜಾತಿ ಗಣತಿ ಬಿಡುಗಡೆ:
ಚಾಮರಾಜನಗರದಲ್ಲಿ 2025ರ ಮಾರ್ಚ 17 ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿಯನ್ನು ಬಿಡಗುಡೆ ಮಾಡುವ ಸಂಭವವಿದೆ. ಜಾತಿ ಗಣತಿಯ ಬಗ್ಗೆ ವಿಸ್ಕೃತವಾಗಿ ಚರ್ಚೆ ನಡೆಸಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ, ಯಾರಿಗು ಅನ್ಯಾಯವಾಗದ ರೀತಿಯಲ್ಲಿ ಒಳಮೀಸಲಾತಿ ಜಾರಿಗೆ ತರಲಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿರುವಂತೆ ಒಳ ಮೀಸಲಾತಿ ಜಾರಿಗೆ ತರಲು ಸಿದ್ದ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.