ಇಂದು ಕೃಷಿ ಕ್ಷೇತ್ರಕ್ಕೆ ಯಂತ್ರಗಳು ಬಂದು ಎಲ್ಲರೂ ಕೃಷಿಯನ್ನು ಮಾಡುವಂತಾಗಿದೆ. ಇಂದು ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ದೊರೆತು ತಂತ್ರಜ್ಞಾನ ಬಳಸಿಕೊಂಡು ಹಂತ ಹಂತವಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ವಾಣಿಜ್ಯ ಕ್ಷೇತ್ರ ಮತ್ತು ಎಲ್ಲಾ ರೀತಿಯ ಆಹಾರವನ್ನು ಕೃಷಿ ಕ್ಷೇತ್ರ ಒದಗಿಸುತ್ತಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಭಾನುವಾರ ಎಸ್.ಆರ್.ಅಗ್ರಿಮಾಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಆವಿಷ್ಕಾರಗಳು ಹೆಚ್ಚಿದ್ದು, ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಪಸಲು ಕಾಣಲು ಸಾಧ್ಯ, ಯಾವ ಬೆಳೆಗೆ ಎಂತಹ ನೈಸರ್ಗಿಕ ಔಷಧ ಸಿಂಪಡಣೆ ಮಾಡಬೇಕು ಎಂಬುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ ಎಂದರು.
ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಒಂದೇ ವೇದಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಉಚಿತ ಮಾಹಿತಿ ನೀಡುವುದು, ಶಿಬಿರ, ಕಾರ್ಯಾಗಾರ ನಡೆಸುವುದು ಅಷ್ಟು ಸುಲಭವಲ್ಲ. ಅಂಥದರಲ್ಲಿ ಎಸ್.ಆರ್.ಅಗ್ರಿಮಾಲ್ ಹೊಸ ಮುನ್ನುಡಿ ಬರೆಯಲಿದೆ ಎಂದು ಹೇಳಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ರೈತರ ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆ ಮಾರುಕಟ್ಟೆಗೆ ತಂದಾಗ ಅದಕ್ಕೆ ಒದಗಿಸುವ ಬೆಲೆ ಮೇಲೆ ರೈತರ ಅಳಿವು – ಉಳಿವಿನ ಪ್ರಶ್ನೆ ಎದುರಾಗುತ್ತದೆ. ಇಂದಿನ ದಿನಮಾನಗಳಲ್ಲಿ ಯಾವ ದಿನ ಬೆಲೆಗಳು ಹೇಗೆ ಇರುತ್ತವೆ ಎಂದು ಊಹಿಸಲೂ ಸಾಧ್ಯವಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿಯ ಜತೆಗೆ ಹೈನುಗಾರಿಕೆಗೆ ಉತ್ತೇಜನ ನೀಡುವುದು, ಅದಕ್ಕೆ ಬೇಕಾಗುವ ಎಲ್ಲ ಬಗೆಯ ಪರಿಕರಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಎಸ್.ಆರ್.ಅಗ್ರಿಮಾಲ್ ಮುಂದಾಗಿರುವುದು ಸಂತೋಷದ ಬೆಳವಣಿಗೆ ಎಂದು ತಿಳಿಸಿದರು.
ಅಗ್ರಿಮಾಲ್ ಸಂಯೋಜಕ ಜ್ಞಾನಸಿಂಧೂ ಸ್ವಾಮಿ ಮಾತನಾಡಿ, ಹೈನುಗಾರಿಕೆ, ತೆಂಗು ಬೆಳೆ, ಮಾವು, ಅಡಕೆ, ಭತ್ತ, ರಾಗಿ, ಸಿರಿಧಾನ್ಯಗಳು, ಗೋದಿ, ಮೆಕ್ಕೆಜೋಳ ಸೇರಿ ಅನೇಕ ಬೆಳೆಗಳ ಮಾಹಿತಿ ಅಗ್ರಿಮಾಲ್ ನಿಂದ ದೊರೆಯಲಿದೆ. ಈಗಾಗಲೇ ರೈತರ ಸಂಘಗಳು, ವಿವಿಧ ಸಂಸ್ಥೆಗಳು ಮತ್ತು ರೈತರು ತಮ್ಮ ಸವಾಲುಗಳ ಕುರಿತು ಚರ್ಚಿಸಿದ್ದು, ಒಂದೊಂದು ಸವಾಲುಗಳ ಬಗ್ಗೆ ಒಂದೊಂದು ದಿನ ಉಚಿತ ಕಾರ್ಯಾಗಾರ ಮಾಡುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಕೃಷಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಎಸ್.ಆರ್.ಅಗ್ರಿಮಾಲ್‌ನಲ್ಲಿ ಮಾಹಿತಿ ಒದಗಿಸಲಾಗುತ್ತಿದೆ. ಒಂದೇ ಸೂರಿನಡಿ ಹಲವು ಸೌಲಭ್ಯಗಳನ್ನು ದೊರೆಯುವಂತೆ ಮಾಡಲು ಸ್ಕ್ರೀನ್‌ನ ಮೂಲಕ ರೈತರಿಗೆ ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ಸಿಗುವ ಅನುದಾನ, ಸಹಾಯಧನದ ಮಾಹಿತಿ ನೀಡುವ ಮೂಲಕ ರೈತರಿಗೆ ಕೃಷಿ ಹೊರೆಯಾಗದಂತೆ ನೋಡಿಕೊಂಡು ವರ್ಷದಿಂದ ವರ್ಷಕ್ಕೆ ಕೃಷಿಯಲ್ಲಿ ಲಾಭದಾಯಕ, ಆತ್ಮಗೌರವದ ಜೀವನ ನಡೆಸಲು ಪ್ರೇರೇಪಿಸುವಂತ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಎಸ್.ಆರ್.ಅಗ್ರಿಮಾಲ್ ಸಂಯೋಜಕ ರಾಮಾಂಜನಿ ಮಿಂಚು, ಪ್ರದೀಪ್, ರುದ್ರಪ್ರಸಾದ್, ಮಂಜುನಾಥ್, ಸುರೇಶ್ , ಶ್ರೀನಿವಾಸ್, ರಘು , ರವಿಶಂಕರ್ ,ಪ್ರವೀಣ್ ಇದ್ದರು