ತುಮಕೂರಿನ ಎಂ.ಜಿ. ರಸ್ತೆಯ ಬಾಲಭವನದಲ್ಲಿ ಜ. 31 ರ ಶುಕ್ರವಾರ ಸಂಜೆ 6.30 ಕ್ಕೆ ಮೈಸೂರು ರಂಗಾಯಣದಿಂದ ಮೈ ಫ್ಯಾಮಿಲಿ ಎಂಬ ನಾಟಕ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಬಾಲಭವನ ಸಮಿತಿ ಹಾಗೂ ಝೆನ್ ಟೀಮ್ ಸಹಯೋಗದೊಂದಿಗೆ ಈ ನಾಟಕವನ್ನು ಪ್ರದರ್ಶಿಸಲಾಗುವುದು. ಶಿಕ್ಷಣದಲ್ಲಿ ರಂಗಭೂಮಿ ಎಂಬ ಪರಿಕಲ್ಪನೆಯಡಿ ಈ ನಾಟಕ ಸಿದ್ಧಪಡಿಸಲಾಗಿದೆ. ರೆಪರ್ಟರಿ ಕಲಾವಿದರು ಅಭಿನಯಿಸಿರುವ ಈ ನಾಟಕದ ಸಂಗೀತ, ವಿನ್ಯಾಸ ಹಾಗೂ ನಿರ್ದೇಶನವನ್ನು ಗಣೇಶ್ ಮಂದಾರ್ತಿ ಮಾಡಿದ್ದಾರೆ. ಸ್ಕ್ರಿಪ್ಟ್ ಮತ್ತು ಡ್ರಮಟರ್ಜಿಯನ್ನು ಸತೀಶ ತಿಪಟೂರು ನಿರ್ವಹಿಸಿದ್ದಾರೆ. ಪಪೆಟ್ರಿಯನ್ನು ಶ್ರವಣï ಹೆಗ್ಗೋಡು ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣï, ಜಿ.ಪಂ. ಸಿಇಓ ಜಿ. ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನï. ಚೇತನಕುಮಾರ್ ಭಾಗವಹಿಸುವರು. ನಾಟಕದ ಮಧ್ಯೆ ಬರುವ ಪಪೆಟ್ರಿ ಎಲ್ಲರನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಈ ನಾಟಕದ ಕಥನವು ಮಕ್ಕಳ ನೋಟಗಳ ಮೂಲಕ ಅವರ ಲೋಕವಿನ್ಯಾಸ, ಗ್ರಹಿಕೆ, ಭಾವನೆ, ಕಲ್ಪನೆಗಳನ್ನು “ಮಕ್ಕಳು” ಎಂದು ಪ್ರತ್ಯೇಕಿಸದೆ ಒಟ್ಟಂದದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ. ತಂತ್ರಜ್ಞಾನ ಯುಗದ ಈ ಕಾಲದಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಮೊಬೈಲ್ ಮೂಲಕ ಹಲವು ವರ್ಚ್ಯುಯಲ್ ಲೋಕಗಳಲ್ಲಿ ಏಕಕಾಲದಲ್ಲಿ ಬದುಕುತ್ತಿವೆ. ಈ “ವರ್ಚ್ಯುಯಲ್ ಜಗತ್ತು” ಎನ್ನುವುದು ನಮ್ಮೆಲ್ಲರ ನಿಜ ಬದುಕಿನ ವಾಸ್ತವವಾಗಿದೆ.
ಇಲ್ಲಿ ಬಾಳುತ್ತಿರುವ ಪ್ರತಿಯೊಬ್ಬರ ಬದುಕಿನ ಲಯಗಳೂ ಬೇರೆ ಬೇರೆಯಾಗಿದೆ. ಹೀಗೆ ಅಸಹಜ ಮತ್ತು ಸಹಜ ಬದುಕಿನ ನಡುವಿನ ವ್ಯತ್ಯಾಸಗಳೇ ಅರಿವಾಗದಂತೆ, ಛಿದ್ರಗೊಂಡಂತೆ ಭಾಸವಾಗುತ್ತಿರುವ ಲೋಕವನ್ನು ಪ್ರಕೃತಿ ಸಹಜ ಲಯ ಮತ್ತು ಭಾವಬಂಧದಲ್ಲಿ ಧ್ಯಾನಿಸುತ್ತಾ ವಾಸ್ತವ ಲೋಕದ ಅರಿವನ್ನು ಪಡೆದುಕೊಳ್ಳುವ ತೀವ್ರ ಪ್ರಯತ್ನ ಈ ಪ್ರಯೋಗದ ಭಾಗವಾಗಿದೆ ಎಂದು ಹೇಳಿದ್ದಾರೆ.
ಈ ಪ್ರಯೋಗವು ಪೋಷಕರು, ಶಿಕ್ಷಕರು ಸೇರಿದಂತೆ ಭವಿಷ್ಯಕ್ಕಾಗಿ ಮಕ್ಕಳನ್ನು ರೂಪಿಸುತ್ತಿದ್ದೇವೆ ಎಂದು ಭಾವಿಸಿರುವ ಈ ಸಮಾಜದ ಎಲ್ಲರೂ ಮಕ್ಕಳ ಕಣ್ಣಿನಲ್ಲಿ ತಮ್ಮನ್ನು ನೋಡಿಕೊಳ್ಳಬೇಕಾದ ನಾಟಕ ಇದಾಗಿದೆ ಎಂದಿದ್ದಾರೆ.