Tuesday, December 24, 2024
Google search engine
Homeಮುಖಪುಟವ್ಯಕ್ತಿ ಪೂಜೆಯಿಂದ ಪ್ರಜೆಗಳಿಗೆ ಉಳಿಗಾಲವಿಲ್ಲ-ಸಾಹಿತಿ ಬರಗೂರು ರಾಮಚಂದ್ರಪ್ಪ

ವ್ಯಕ್ತಿ ಪೂಜೆಯಿಂದ ಪ್ರಜೆಗಳಿಗೆ ಉಳಿಗಾಲವಿಲ್ಲ-ಸಾಹಿತಿ ಬರಗೂರು ರಾಮಚಂದ್ರಪ್ಪ

ಪ್ರಜಾಪ್ರಭುತ್ವದ ಕಾಳಜಿಗಳ, ಅಸ್ಮಿತೆಯ, ಬಹುತ್ವದ ಹಾಗೂ ಸಂಯುಕ್ತ ರಾಜಕಾರಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಊಳಿಗಮಾನ್ಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವುದು ದುರ್ದೈವದ ಸಂಗತಿ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಹಿತಚಿಂತನೆಯು ಪಕ್ಷದಿಂದ ನಾಯಕರ ಹಿತಚಿಂತನೆಗೆ ಇಳಿದಿದೆ. ವ್ಯಕ್ತಿಗತ ರಾಜಕಾರಣ ಎಂದಿಗೂ ಅಸಮಾನತೆಯನ್ನು ತೋರಿಸುತ್ತದೆ. ಸರ್ಕಾರವನ್ನು, ದುರಾಡಳಿತವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂದು, ದೇಶ ವಿರೋಧಿ ಚಟುವಟಿಕೆಯ ಕಾನೂನಿನ ಅಡಿಯಲ್ಲಿ ಬಂಧಿಸುತ್ತಾರೆ. ನಾಯಕತ್ವ ಏಕತ್ವವಾಗಿ ಸರ್ವಾಧಿಕಾರ ತಲೆದೂರಿದೆ. ಬಹುತ್ವದ ನಾಯಕತ್ವ ಇಂದಿನ ಅಗತ್ಯವಾಗಿದೆ. ನಾಯಕನಲ್ಲಿ ಬಹುತ್ವ ಜೀವಿಸಬೇಕು ಎಂದರು.

ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯ ಮುಖವನ್ನು ಪ್ರಕಟಿಸಿ ಚುನಾವಣೆಗಳನ್ನು ಎದುರಿಸುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವವೇ?ಈ ನಡೆ ಶಾಸಕರ ಮತ್ತು ಸಂಸದರ ಹಕ್ಕಿಗೆ ಚ್ಯುತಿತಂದಂತೆ.ಇದನ್ನು ಪ್ರಜೆಗಳು ಹಾಗೂ ಮಾಧ್ಯಮದವರು ಪ್ರಶ್ನಿಸುತ್ತಿಲ್ಲವೇಕೆ? ವ್ಯಕ್ತಿ ಪೂಜೆಯಲ್ಲಿ ನಿರತರಾಗಿರುವ ಪ್ರಜೆಗಳಿಗೆ ಉಳಿಗಾಲವಿಲ್ಲ ಎಂದು ತಿಳಿಸಿದರು.

ತಾತ್ವಿಕ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು, ಜನಪ್ರತಿನಿಧಿಗಳು ಬದುಕುತ್ತಿಲ್ಲ. ಬೌದ್ಧಿಕ ವಲಯದ ವಿಭಜಿತ ರೂಪವು ವಿರಾಟರೂಪ ತಾಳಿದೆ. ಸೈದ್ಧಾಂತಿಕ ಬದ್ಧತೆಯೊಂದಿಗೆ ಸಂವಹನ, ಸಂವಾದವಿರಬೇಕು. ಜಾತಿ, ಧರ್ಮವು ರಾಜಕೀಯ ನೆಲೆಯಲ್ಲಿ ದ್ವೇಷಕ್ಕೆ ಕಾರಣವಾಗುತ್ತಿದೆ. ದ್ವೇಷೋತ್ಪಾದನೆಯ ದೇಶವಾಗಿ ಭಾರತ ಬದಲಾಗುತ್ತಿದೆ. ನುಡಿ ನೈತಿಕತೆಯ ನಾಶದ ಸಂದರ್ಭದಲ್ಲಿದ್ದೇವೆ. ಪ್ರಜಾಪ್ರಭುತ್ವದ ಪರಿಭಾಷೆಯನ್ನು ಮರೆತಿದ್ದೇವೆ ಎಂದರು.

ಶಾಸಕರು ಹಾಗೂ ಸಂಸದರು ಜನಪ್ರತಿನಿಧಿಗಳ ಮಟ್ಟದಿಂದ ಸಂಖ್ಯೆಯ ಮಟ್ಟಕ್ಕೆ ಇಳಿದಿರುವುದು ಪ್ರಜಾಪ್ರಭುತ್ವದ ಅವನತಿ. ರಾಜಕೀಯ ಸಾಕ್ಷರತೆ ಇಲ್ಲದವನೇ ನಿಜವಾದ ಅನಕ್ಷರಸ್ಥ. ಪಂಚೇದ್ರಿಯಗಳು ಮಲಿನವಾಗಿರುವ ಸಂದರ್ಭದಲ್ಲಿ ಅಸ್ಪೃಶ್ಯತೆಯು ತಾಂಡವವಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಲಿಂಗರಾಜು, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯ ಅಧ್ಯಕ್ಷ ಡಾ. ಟಿ. ಜಿ. ನಾಗಭೂಷಣ ಮೊದಲಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular