(ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವನ್ನೂ ಮಾಡಿಸಬೇಕೆಂಬ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ)
ಕುರಿ ಕುರಿಯೆ ಚಂದ
ಕುಸುಮೆ ಹೂವೆ ಚಂದ
ಮರಿ ಕುದುರೆ ಚಂದ ಕುಣಿಯೋಕೆ
ಮರಿ ಕುದುರೆ ಚಂದ ಕುಣಿಯೋಕೆ ಬುಳ್ಳಪ್ಪ
ಕುರಿಹಟ್ಟಿಗೆ ಆಡೋ ಮರಿ ಚಂದ
**
ಆಡು ಹೊರಟಾವು
ನೇತಾಡೊ ಕಿವಿಯಾವು
ಜಂಗೀಸಿ ಗಿಡವಾ ಮೇಯಾವು
ಜಂಗೀಸಿ ಗಿಡವ ಮೇಯೋವು ಆಡುಗಳು
ಮೇವಿಗೆ ಇಳಿದಾವೆ ಬೇಲೀಗೆ
**
ಆಡು ಕಾಯೋಳೆ
ನೇತಾಡೊ ಕಿವಿಯೋಳೆ
ಎಲ್ಲಮ್ಮಿ ನಿನ್ನ ಬೆಂಡೋಲೆ
ಎಲ್ಲಮ್ಮಿ ನಿನ್ನ ಬೆಂಡೋಲೆ ಬೈಂದಾಗ
ನಿಮ್ಮವ್ವ ನೋಡಿದರೆ ಬೈದಾಳು
**
ಹೀಗೆ ಪದ ಹೇಳಿಕೊಂಡು ಅಡವಿ ಮೇಲೆ ನಾವು ಆಡು ಕುರಿ ಕಾಯೋದು; ಅವುಗಳನ್ನು ಸಾಕಿ ಕಾಡಿಗೆ ಹೊಡಿಯೋಕಲ್ಲ, ಮಾಡಿಕೊಂಡು ಉಣ್ಣೋಕೆ. ಸಾಕಿದ ಕೋಳಿ, ರೊಪ್ಪದ ಕುರಿ ನಿಮ್ಮೋವು ಎಂದು ಅರಿಕೆ ಹೊತ್ತು ಜಾತ್ರೆ ಮಾಡೋದು ಬಂದು ಬಳಗ ಕರೆದು ಹಬ್ಬ ಮಾಡೋಕೆ. ಆಡು ಕುರಿ ಕಾಯೋರನ್ನು ನಮ್ಮ ನಾಡಿನ ಉದ್ದಕ್ಕೂ ಕಾಣುತ್ತೇವೆ. ನಾವೂ ಆಡು ಕುರಿ ಅಡವಿ ಮೇಲೆ ಮೇಯಿಸಲು ಹೋದಾಗ ಇಂತಹ ಹಲವಾರು ಪದಗಳನ್ನು ಹೇಳಿಕೊಂಡು ನಮ್ಮ ಬದುಕಿನ ಆನುಪಾನು ನೋಡಿಕೊಂಡಿದ್ದೇವೆ.
ಜಾತ್ರೆಗಳು ಬಂದರೆ ನಮ್ಮ ಗ್ರಾಮಗಳು ಮೊದಲು ಮಾಡುವುದು ಗ್ರಾಮದೇವತೆಗಳ ಬಾನ. ಬಾನದ ದಿನ ಮಾಡೋದು ಬಾಡೂಟ. ಬಾನಮಾಡಿ ಮರಿ ಮಾರಿಗುಡಿ ಮುಂದೆ ಕೊರಳು ಬಿಡುವಾಗ ಪದ ಹೇಳಿ ‘ಊರುಮಾರಿ’ ಮಾಡೋ ಹಳ್ಳಿಗಳು ನಾಡು ತುಂಬಾ ಅವೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅಡವಿ ತಿರುಗಿ ‘ಬಾಡಿನ ಬೆಳೆ’ ಆಡುಕುರಿ ಸಾಕಾಣಿಕೆ ಮಾಡುತ್ತೇವೆ. ಮಾಂಸಾಹಾರದ ಬಗ್ಗೆ ಅಪದ್ದಗಳನ್ನಾಡುವವರಿಗೆ ಬಾಡಿನ ಬೆಳೆಗಾರರ ಬದುಕಿನ ಸಂಸ್ಕೃತಿ ಅರ್ಥವಾಗಲಾರದು. ಊರು, ಹಟ್ಟಿ,, ಹೊಲ, ತೋಟ, ಹುಲ್ಲುಗಾವಲು, ಕಾಡುಗಳಲ್ಲಿ ರೊಪ್ಪ ಕಟ್ಟಿ ಬಣ್ಣಬಣ್ದ ಆಡು,ಕುರಿ, ದನ ಆಳಿದ ನಾಡಿನ ಜನರ ಅನ್ನ ‘ಬಾಡು’. ಅಷ್ಟೇ ಅಲ್ಲ, ಆಡುಕುರಿ ಅಡವು ಆಸ್ತಿ ಹೊಂದಿರುವವರು ನಾಡ ಮೇಲೆ ಹುಲ್ಲು ನೀರು ಹುಡುಕಿ ವಲಸೆ ಹೋಗುವರು. ಇವರೆಲ್ಲರೂ ನಾಡಿಗೇ ಬಾಡು ಬೆಳೆಯುವ ಬೆಳೆಗಾರರು. ಆಗಾದರೆ ನುಡಿ ಜಾತ್ರೆಗೆ ಬಾಡು ಯಾಕೆ ಬ್ಯಾಡ? ಆಗಲಿ ಮಂಡ್ಯ ಜಿಲ್ಲೆಯಲ್ಲಿ ಆಡುಕುರಿಗಳ ಹಬ್ಬದ ಸಂತೆ. ಹಬ್ಬ ಸಂತೆ ನೆಡೆದರೆ ತಾನೆ ಆಡುಕುರಿಗೆ ಒಳ್ಳೆಯ ಬೆಲೆ ಬರೋದು.
ದೇವರು ಮಾಡ್ತೀವಿ ಎಂದರೆ ಬಾಡಿನ ದಿನ ಹೋಗ್ತೀವಿ ಮತ್ತು ಬಾನ ಯಾವತ್ತು ಎಂದು ಕೇಳ್ತೀವಿ ಎಕೆಂದರೆ ಬಾನದ ದಿನವೇ ಬಾಡು ಮಾಡೋದು. ಮನೆ ಮುಂದೆ ಒಲೆಯೂಡಿ ಷಾಮಿಯಾನ ಹಾಕಿ ಬಂದು ಬಳಗ ಸ್ನೇಹಿತರು ಸಂಬಂಧಿಕರನ್ನು ಕರೆದು ಬಾಡು ಬೇಯಿಸಿ ಬಾನಾಮಾಡುವುದು ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ದಿನಗಳ ಬಾಡೂಟದ ವೈಭವ. ನಮ್ಮ ನಾಡವಳಿಯೊಳಗೆ ಬೊಗಸಿಕೊಳ್ಳೋದೆ ಬಾಡನ್ನು. ಬಾಯಿ ಕೆಟ್ಟಿದೆ ಎಂದರೆ ಬಾಡು ತಿನ್ನುವದೇ ಆಗಿರುತ್ತದೆ ನಮ್ಮ ಬಯಕೆ.
ಆಹಾರವನ್ನು ಕುರಿತು ಅಗ್ಗವಾಗಿ ಮಾತನಾಡುವವರಿಗೆ ಸಂಸ್ಕೃತಿಯ ಅರಿವಿರಬೇಕಾಗುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಬಾಡು ನಿಷಿದ್ಧ ಎಂದು ಪರಮಾನು ಹೊರಡಿಸುವುದು ಅಸಂಬದ್ಧ ತೀರ್ಮಾನವಾಗುತ್ತದೆ. ಪರಿಷತ್ತಿನ ನಡೆ ಈ ಹಿನ್ನೆಲೆಯಲ್ಲಿ ಅಕ್ಷಮ್ಯ. ನಾಡೇ ಬಯಸುವ ಬಾಡು ನುಡಿ ಜಾತ್ರೆಯಲ್ಲಿ ಯಾಕೆ ನಿಷಿದ್ಧ ವಾಗಬೇಕು?
ವಾಲುಗ, ಉತ್ಸವ, ಆಡು ಕುರಿ, ಕೋಳಿಗಳ ಮೆರವಣಿಗೆ ಗ್ರಾಮದೈವಗಳ ಗುಡಿಯ ಮುಂದೆ ನಡೆಯುತ್ತದೆ. ಉಂಡೆ ಮರಿಗಳ ಬಾಡಿನಿಂದ ಗುಡ್ಡೆ ಬಾಡಿನವರೆಗೂ ಬಾಡು ತಂದು ಜಾತ್ರೆ ಮಾಡೋರು ಸೇರುವ ನುಡಿ ಜಾತ್ರೆಯಲ್ಲಿ ಬಾಡು ಬಳಸಿದಿದರೆ ಯಾಕೆ ಬೇಜಾರು. ಮಾಂಸದ ಬೆಳೆ ಆಡು ಕುರಿ ಸಾಕಾಣಿಕೆದಾರರು ನಮ್ಮ ಎಲ್ಲಾ ಹಳ್ಳಿಗಳಲ್ಲೂ ಇದ್ದಾರೆ. ಜಾತ್ರೆ ಬಂದ ಕೂಡಲೇ ಬಂಡಿ ಬಾಡಿನ ಬಾನಗಳು ನಡೆಯುತ್ತವೆ. ಸಾಮಾನ್ಯವಾಗಿ ನಮ್ಮ ಗ್ರಾಮ ದೈವಗಳು ಬಾನದ ದಿನ ಬಾಡಿನ ಎಡೆ ನೈವೇದ್ಯ ಪಡೆಯಲು ಆರಾತುರಿಯಲ್ಲಿರುತ್ತವೆ. ಬಾನದ ಮರುದಿನ ಬಹುತೇಕ ಉಳಿದ ಸೇವೆಗಳು ಪ್ರಾರಂಭವಾಗುವುದು.
ರಥೋತ್ಸವ, ಕೆಂಡೋತ್ಸವ, ಈರಕೆ, ಕತ್ತಿ, ತೇರು, ಸಿಡಿ, ಉಲ್ಯಾಲೆ ಇತ್ಯಾದಿಗಳು ಬಾಡಿನ ಬಾನ ಮುಗಿದ ನಂತರದಲ್ಲಿಯೇ ಶುರುವಾಗಿ, ಜಾತ್ರೆಗಳು ಮುಕ್ತಾಯಗೊಳ್ಳುತ್ತವೆ. ಬಾಡು ಮಾಡುಂಡು ಜಾತ್ರೆಗೆ ನಡೆಯುವರು. ಬಾಡು ಉಣ್ಣಲೇ ಜಾತ್ರೆ. “ಸ್ವಾರೆ ತುಂಬಾ ಬಾಡು ಕಣ್ತುಂಬಾ ಜಾತ್ರೆ ನಮ್ಮ ಬಾಡಿನ ಸಂಸ್ಕೃತಿಯ ವೈಶಿಷ್ಟ್ಯ”. ಜಾತ್ರೆಗಳಿಗೆ ಬರುವವರಿಗೆ ಬಾಡಿನ ಬಹು ಬಗೆಯ ಅಡಿಗೆಗಳನ್ನು ಮಾಡಿಕೊಂಡು ಕಾಯುವರು. ಅರಿಕೆ ಹೊರುವರು ಬಾಡು ಮಾಡಿ ಉಣಬಡಿಸಲು. ನಾಡಿನ ತುಂಬೆಲ್ಲಾ ಬಾಡಿನ ದೇವಾನುದೇವತೆಗಳು ನೆಲಸಿವೆ. ಇವೆಲ್ಲವೂ ನಾಡು ನುಡಿ ಬೆಳೆಸಿದ ದೈವಗಳೇ ಆಗಿವೆ. ಇವುಗಳ ಮೇಲೆ ಬೇಕಾದಷ್ಟು ಸಾಹಿತ್ಯವಿದೆ.
ನುಡಿ ಜಾತ್ರೆ ಸಾಹಿತ್ಯ ಸಮ್ಮೇಳನದಲ್ಲಿ ಬಾಡಿನ ಬಳಕೆ ಮಾಡುವುದು ಬೇಡ ಎನ್ನುವ ತೀರ್ಮಾನ ಸಲ್ಲದು. ಬಾಡಿನ ಊಟ ಹಾಕಿಸುವವರಿಗೆ ಬಾಡು ಬೆಳೆಗಾರರ ನಾಡಿನಲ್ಲಿ ಮಾಂಸಾಹಾರ ನಿಷೇಧ ಮಾಡುವುದು ಅಸಂಬದ್ಧ ಮತ್ತು ಅಸಂವಿಧಾನಿಕ. ಬಾಡಿನ ಅಸಂಖ್ಯಾತ ಸಾಕು ಪ್ರಾಣಿಗಳ ಸಾಕಾಣಿಕೆಯ ಮೇಲೂ ಇದರ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಆಡುಕುರಿ ಮಾರಾಟ ವ್ಯವಸ್ಥೆ ವ್ಯಾಪಾರವೂ ಹಾಳಾಗುತ್ತದೆ. ಪದೇಪದೇ ಬಾಡಿನ ಬಗ್ಗೆ ಮಾತನಾಡಿ ಸಂತೆಗಳಲ್ಲಿ ನಮ್ಮ ಆಡು, ಕುರಿ, ಕೋಳಿ, ಮೊಟ್ಟೆಗಳ ಮಾರುಕಟ್ಟೆ ಕುಸಿಯುವಂತೆ ಮಾಡಲಾಗುತ್ತಿದೆ. ನಮ್ಮ ಬಾಡುಬಳ್ಳೆಯ ಬದುಕನ್ನು ಯಾರದೋ ಮೂಗಿನ ನೇರಕ್ಕೆ ಕಟ್ಟಿಕೊಳ್ಳಲಾಗದು.
ಬಾಡೂಟ ಮಾಡುವವರಿಗೆ, ತಯಾರಕರಿಗೆ, ಮಾರಾಟಗಾರರಿಗೆ ಯಾರದೇ, ಯಾವುದೇ ಅಡ್ಡಿ ಅತಂಕಗಳಿರಬಾರದು. ಬಾಡುಣ್ಣುವವರು, ಬಾಡಿನಬೆಳೆ ಸಾಕಾಣಿಕೆದಾರರು ಸಾಹಿತ್ಯದ ಜಾತ್ರೆಗೂ ಬರುವವರು. ಜಾತ್ರೆ ಎಂದ ಮೇಲೆ ಅದನ್ನೇ, ಇದನ್ನೇ ಉಣ್ಣಬೇಕು ಎಂಬುದೇನೂ ಇರಬಾದು. ಆಹಾರ ಅವರವರ ಪ್ರೀತಿ, ಅವರವರ ಅಪೇಕ್ಷೆ, ಅವರವರ ಅನುಕೂಲ. ನಾವು ಬೆಳದದ್ದನ್ನು ನಾವು ಬಹಿರಂಗವಾಗಿ ಉಣ್ಣುತ್ತೇವೆ. ಮಾಂಸಾಹಾರ ಅಲ್ಲಿ ಬೇಡ, ಇಲ್ಲಿ ಬೇಡ ಎನ್ನುವ ನಿರ್ಬಂಧ ಸಮಜೋಕಾದುದಲ್ಲ. ನುಡಿ ಜಾತ್ರೆಯಲ್ಲಿ ಬಾಡೂ ಬೇಯಲಿ. ಬಾಡು ಬೇಡ ಎಂದು ಹೇಳುವುದು ಸರಿಯಲ್ಲ. ಗ್ರಾಮದೇವತೆಗಳ ಜಾತ್ರೆಗೆ ಎಲ್ಲರೂ ಬರುವ ಹಾಗೆಯೇ ನುಡಿ ಜಾತ್ರೆಗೂ ಬರುವರು.
ಆಡುಕುರಿ ತಿನ್ನೋರು ಅವುಗಳ ಬಾಡಿನ ಎಡೆಮಾಡುವರು. ನಮ್ಮ ಗ್ರಾಮಗಳಲ್ಲಿ ಗ್ರಾಮ ದೇವತೆಗಳೇ ಅದು ಬೇಕು, ಇದು ಬೇಕು ಎಂದು ಕೇಳಿಲ್ಲ. ಜನರೂ ಅದುಣ್ಣು, ಇದುಣ್ಣು ಎಂದು ದೈವಗಳಿಗೆ ಹೇಳಿಲ್ಲ, ಎಂದ ಮೇಲೆ ನುಡಿ ಜಾತ್ರೆಯಲ್ಲಿ ಮಾಂಸದ ಬಳಕೆಯ ಬಗ್ಗೆ ತಕರಾರು ಆದರೂ ಯಾಕೆ? ಆಡುಕುರಿಕೋಳಿ ಬೇಳಿಯೋರು ಅವುಗಳ ಮಾಂಸ ಎಡೆಮಾಡಿ ತಿನ್ನುತ್ತೇವೆ. ಅವುಗಳನ್ನು ಬಳಿದೋರು, ಅವರು ಬೆಳೆದದ್ದು ಎಡೆ ಮಾಡುವರು. ಹಳ್ಳಿಗಳಲ್ಲಿ ನುಡಿ ಜಾತ್ರೆಗಳ ಹಾಗೆಯೇ ದೊಡ್ಡ ದೊಡ್ಡದಾಗಿ ಜಾತ್ರೆಗಳು ನಡೆಯುತ್ತವೆ. ನಾಯಕನಹಟ್ಟಿ ಜಾತ್ರೆಯಿಂದ ಚಿಕ್ಕೆಲ್ಲೂರು ಜಾತ್ರೆವರಿಗೂ ನಾಡಿನಲ್ಲಿ ಬಾಡು ಬೇಯುತ್ತೆ. ನುಡಿ ಜಾತ್ರೇಲಿ ಬಾಡು ಮಾಡಿದರೆ ಆಯೋಜಕರಿಗೆ ಯಾಕೆ ನೆಗಡಿ, ಕೆಮ್ಮು ಬರಬೇಕು?
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಿಗಳ ಕುರಿತು ಚರ್ಚೆಗಳು ಮುನ್ನಲೆಗೆ ಬಂದಿವೆ. ಗ್ರಾಮದೇವತೆಗಳಿಗೆ ಎಲ್ಲರೂ ಅವರವರ ಮನೆಯ ತಳಿಗೆ ತರುವರು. ಇಬ್ಬಂದಿಯನ್ನೇನು ಮಾಡಲ್ಲ ಸಾಮಾನ್ಯವಾಗಿ ಯಾವುದೇ ಊರಿನ ಗ್ರಾಮದೇವತೆಯರು. ಅದು ಬ್ಯಾಡ, ಇದು ಬ್ಯಾಡ ಎನ್ನದೆ ದೇವರುಗಳಿಗೆ ಎಲ್ಲರ ಮನೆಯಲ್ಲಿ ಬೆಂದದ್ದೂ ಎಡೆಯೇರುವುದು. ಗ್ರಾಮಗಳಲ್ಲಿ ಮಾಂಸ ಮತ್ತು ಸಸ್ಯಾಹಾರಗಳ ಎಡೆಬಿಡಾರಗಳು ನಡೆವಾಗ ಸಾಹಿತ್ಯ ಸಮ್ಮೇಳನದಲ್ಲಿ ಅವರವರ ಆಹಾರವನ್ನು ಅವರವರು ಬಳಸಿದರೆ ನುಡಿ ಪರಿಷೆಗೆ ಸಮಸ್ಯೆ ಏನೂ ಆಗದು. ಊರಲ್ಲಿ ಮಾಂಸ ತಿನ್ನೋ ದೇವರಿವೆ ಎಂದು ಯಾರೂ ಊರು ಬಿಟ್ಟು ಹೋಗಲ್ಲ. ಜಾತ್ರೆಗೆ ಬರುವವರು ಕಮ್ಮಿ ಆಗಲ್ಲ. ಗ್ರಾಮಸ್ಥರು ಯಾರಿಗೂ ನಿರ್ಬಂಧವನ್ನೂ ಹೇರಲ್ಲ. ಗ್ರಾಮಗಳಿಗೆ ಮತ್ತು ಗ್ರಾಮದ ಅದಿದೇವತೆಗಳಿಗೆ ಊರೆಲ್ಲವೂ ಒಕ್ಕಲೆ. ನಾಡೆಲ್ಲಾ ಬರುವ ನುಡಿ ಜಾತ್ರೆಗೂ ಆಹಾರದ ನಿರ್ಬಂಧ ಹೇರಬಾರದು. ಎಲ್ಲರೂ ಸೇರಿಯೇ ಜಾತ್ರೆಗಳನ್ನು ವಿಜೃಂಭಣೆಯಿಂದ ಮಾಡುವ ಹಾಗೆ ನುಡಿ ಜಾತ್ರೆಯೂ ನಡೆಯಬೇಕಾಗುತ್ತದೆ. ನಮ್ಮ ದೇವರುಗಳು ಬಾಡೂಟಕ್ಕೂ ಸೈ, ಬೆಲ್ಲದ ಅನ್ನಕ್ಕೂ ಸೈ.
ನುಡಿ ಜಾತ್ರೆಯೂ ನಮ್ಮ ನಾಡಿನ ಗ್ರಾಮದೇವತೆಗಳ ಜಾತ್ರೆಯ ತರವಿರಲಿ. ಮಾಂಸ ಬಿಟ್ಟು ಮಡಿಮೇಲೆ ಬೇರಬೇಕಾದಂಹ ಮಡಿಮೈಲಿಗೆಯ ವಿಚಾರಗಳನ್ನು ನುಡಿ ಜಾತ್ರೆಗೆ ಮೆತ್ತಾಕಬಾರದು. ನಾಡಿನಾದ್ಯಂತ ಕಳೆದ ಎರೆಡು ಮೂರು ತಿಂಗಳಿನಿಂದಲೂ ಬಾಡಿನ ಹಬ್ಬಗಳನ್ನು ಮೆರೆದೋಗಿವೆ. ಮನೆಯ ಮಂದೆ ಬಾಡು ಬೇಯಿಸಲು ಊಡಿದ ಒಲೆ ತೆಗೆಯುವುದರೊಳಗಾಗಿ ಬೇಸಿಗೆ ಕಾಲದ ಜಾತ್ರೆಗಳಿಗೆ ಹಳ್ಳಿಗಳು ಅಣಿಯಾಗುತ್ತವೆ. ಕಣಗಾಲ ಬಹಳ ಬೇಗನೇ ಮುಗಿದು ಇನ್ನೇನು ಬಾಡು, ಬಾನಗಳ ಮೆರವಣಿಗೆ ಹಳ್ಳಿ ಮನೆಗಳಲ್ಲಿ ಶುರುವಾಗಲಿದೆ. ಸಂತೆಗ್ಳ ಕುರಿ ಕೋಳಿ ಹರಿದು ಬರುತ್ತವೆ ಜಾತ್ರೆಗಳಿಗೆ. ಸಾಲುಹಳ್ಳಿಗಳ ಕುರಿಕೋಳಿಗಳು ಮಾರಿ ಪರಿಷೆಗಳಿಗೆ ಬರುತ್ತವೆ. ಪದಗಳು ಒಂದೇಸಮನೆ ಸ್ವರವೇರುತ್ತವೆ. ಊರು ಮಾರಿ, ಹಟ್ಟಿಮಾರಿಗಳ ಜಾತ್ರೆಗಳು ಬಂದರೆ ಸಾಕು ಮಾಂಸದ ಅಡಿಗೆ ಊಟಗಳಿಗೆ ಆಡು ಕುರಿ ಕೋಳಿ ಅಷ್ಟೇ ಅಲ್ಲ, ಉಣ್ಣೋ ಎಲೆ ಸಾಲದೇಬರುವವು. ಸಾಹಿತ್ಯದ ಪರಿಷೆಯೂ ನಮ್ಮ ನಾಡ ದೇವತೆಗಳ ಜಾತ್ರೆಗಳ ಹಾಗೆಯೇ ನಡೆಯಲಿ.
ಬರೆಹ: ಉಜ್ಜಜ್ಜಿ ರಾಜಣ್ಣ, ಲೇಖಕರು.