ಮನುಷ್ಯರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಸಮಾಜದ ನೆಮ್ಮದಿಗೆ ಅಗತ್ಯವಾದ ನಡವಳಿಕೆಗಳನ್ನು ಮನುಷ್ಯ ರೂಪಿಸಿಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರು ಮಾನವ ಹಕ್ಕುಗಳ ವ್ಯಾಪ್ತಿಯನ್ನು ತಿಳಿಯುವುದು ಅವಶ್ಯಕವಾಗಿದೆ. ಕವಿ ರವೀಂದ್ರನಾಥ ಠಾಗೋರ್ ಹೇಳುತ್ತಾರೆ ‘ಚಿಟ್ಟಿಗಳು ವರ್ಷಗಳ ಕಾಲ ಜೀವಿಸುವುದಿಲ್ಲ, ಕೆಲವು ದಿನವಷ್ಟೇ ಅವುಗಳ ಜೀವನ. ಅವು ಇರುವಷ್ಟು ಕಾಲ ಪರಸ್ಪರ ನೆಮ್ಮದಿ, ಸುಖದಿಂದ ಬಾಳುತ್ತವೆ.’ ಇದೇ ರೀತಿ ಮನುಷ್ಯರು ಕೂಡ ಸುಖವಾಗಿ ಜೀವಿಸಬೇಕು. ಇತರರಿಗೆ ತೊಂದರೆ ಕೊಟ್ಟು ಜೀವಿಸುವಂತಹ ಕ್ರಿಯೆ, ಭಾವನೆಗಳನ್ನು ತ್ಯಜಿಸಬೇಕೆಂದು ತಿಳಿಸಿದರು.
ಜಿ.ಪಂ, ಸಿಇಒ ಜಿ.ಪ್ರಭು ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಇಂದು ಅನೇಕ ಮಾನವ ಹಕ್ಕುಗಳ ಅಧಿನಿಯಮಗಳು ಜಾರಿಯಲ್ಲಿವೆ. ನಾವೆಲ್ಲರೂ ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಮಾನವೀಯ ಗುಣಗಳೊಂದಿಗೆ ಎಲ್ಲರ ಹಿತಕ್ಕಾಗಿ ಜೀವಿಸಬೇಕು. ಇದೇ ಮಾನವ ಹಕ್ಕುಗಳ ನಿಜವಾದ ಉದ್ದೇಶವಾಗಿದೆ ಎಂದರು.
ಎಡಿಸಿ ಡಾ: ಎನ್. ತಿಪ್ಪೇಸ್ವಾಮಿ, ಎಎಸ್‌ಪಿ ಅಬ್ದುಲ್ ಖಾದರ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮೊದಲಾದವರು ಇದ್ದರು.