ತುಮಕೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಆರ್. ನಾರಾಯಣ್ (82) ಅವರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮಾಜಿ ಶಾಸಕ ನಾರಾಯಣ್ ಅವರು ವಯೋಸಹಜ ಕಾಯಿಲೆಗೆ ತುತ್ತಾಗಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ತುಮಕೂರು ತಾಲ್ಲೂಕು ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿದ್ದ ಆರ್. ನಾರಾಯಣ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿದ್ದರು.
1989 ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಆರ್.ನಾರಾಯಣ್ ಸತತವಾಗಿ 1994ರ ಚುನಾವಣೆ ಹಾಗೂ 1999ರ ವಿಧಾನಸಭಾ ಚುನಾವಣೆಯಲ್ಲೂ ಜಯಗಳಿಸಿ ಶಾಸಕರಾಗಿದ್ದರು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ತುಮಕೂರು ನಗರದ ಸಿಎಸ್‌ಐ ಲೇಔಟ್‌ನಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಸಂಜೆ ನಗರದ ಗಾರ್ಡನ್ ರಸ್ತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಾಜಿ ಶಾಸಕ ಆರ್. ನಾರಾಯಣ್ ನಿಧನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಿಲ್ಲೆಯ ಶಾಸಕರಾದ ಕೆ. ಷಡಕ್ಷರಿ, ಎಸ್.ಆರ್. ಶ್ರೀನಿವಾಸ್, ಡಾ. ರಂಗನಾಥ್, ಸುರೇಶ್‌ಗೌಡ, ಜ್ಯೋತಿಗಣೇಶ್, ಹೆಚ್.ವಿ. ವೆಂಕಟೇಶ್, ಎಂ.ಟಿ. ಕೃಷ್ಣಪ್ಪ, ಕೆಪಿಸಿಸಿ ಮುಖಂಡರಾದ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ, ಕೆಂಚಮಾರಯ್ಯ, ಮಾಜಿ ಶಾಸಕರಾದ ಹೆಚ್. ನಿಂಗಪ್ಪ, ರಫೀಕ್ ಅಹಮದ್, ಮುಖಂಡರಾದ ಟಿ. ಆರ್. ನಾಗರಾಜು, ಧರಣೇಂದ್ರಕುಮಾರ್, ಸಿಮೆಂಟ್ ಮಂಜಣ್ಣ, ಎಂ.ವಿ. ಬಸವರಾಜು, ಹೆಬ್ಬೂರು ಬೋರೆಗೌಡ, ರಾಜಣ್ಣ, ಕೆಂಪಣ್ಣ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದು, ತೀವ್ರ ಸಂತಾಪ ವ್ಯಕ್ತಪಡಿಸಿದರು.