Sunday, December 22, 2024
Google search engine
Homeಮುಖಪುಟಏಕೀಕರಣ ವಿರೋಧಿಸಿದ ಒಕ್ಕಲಿಗರ ಪ್ರಾಬಲ್ಯದ ಮೈಸೂರು ರಾಜ್ಯ-ಪ್ರೊ.ರಾಜೇಂದ್ರ ಚೆನ್ನಿ

ಏಕೀಕರಣ ವಿರೋಧಿಸಿದ ಒಕ್ಕಲಿಗರ ಪ್ರಾಬಲ್ಯದ ಮೈಸೂರು ರಾಜ್ಯ-ಪ್ರೊ.ರಾಜೇಂದ್ರ ಚೆನ್ನಿ

ಒಕ್ಕಲಿಗರ ಪ್ರಾಬಲ್ಯ ಹೊಂದಿದ್ದ ಅಂದಿನ ಮೈಸೂರು ರಾಜ್ಯ ಕರ್ನಾಟಕ ಏಕೀಕರಣವನ್ನು ವಿರೋಧಿಸಿತು. ಮೇಲ್ಜಾತಿಯವರ, ದಲಿತರ, ಇತರೆ ಸಮುದಾಯಗಳ ಭಾಗವಹಿಸುವಿಕೆ ಅನುಸಂಧಾನ ಮಾರ್ಗವನ್ನು ಕಂಡಿತು ಎಂದು ಸಾಹಿತಿ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠವು ಆಯೋಜಿಸಿದ್ದ ‘ಸ್ಟೇಟ್ ಮ್ಯಾಟರ್ಸ್: ಕನ್ನಡ ಸಬ್-ನ್ಯಾಷನಲಿಸಂ ಅಂಡ್ ಸ್ಟೇಟ್ ಫಾರ್ಮೆಷನ್’ ಪುಸ್ತಕದ ಕುರಿತು ಅವರು ಮಾತನಾಡಿದರು.

ಕರ್ನಾಟಕ ರಾಜ್ಯದ ಕುರಿತು ಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ. ಕವಿರಾಜಮಾರ್ಗದಲ್ಲಿ ಕನ್ನಡ ರಾಜ್ಯದ ಕುರಿತು, ಕನ್ನಡಿಗರ ಬಗ್ಗೆ ಉಲ್ಲೇಖವಿದ್ದರೂ ಕರ್ನಾಟಕ ಏಕೀಕರಣದ ನಂತರವೇ ಕನ್ನಡ ಸಮುದಾಯಗಳು ಒಂದೇ ಸೂರಿನಡಿ ನೆಲೆಕಂಡಿದ್ದು ಎಂದರು.

ಕರ್ನಾಟಕ ಏಕೀಕರಣಕ್ಕೂ ಮುನ್ನ ಕನ್ನಡ ಮಾತನಾಡುವ ಸಮುದಾಯಗಳು 30 ತುಂಡುಗಳಾಗಿದ್ದವು. ಸಮುದಾಯಗಳನ್ನು ತುಂಡರಿಸಿ ಬ್ರಿಟಿಷ್ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ನಡೆಯಿಂದ ಕನ್ನಡಿಗರು ಒಗ್ಗೂಡಿ ಬಾಳಲು ಸಾಧ್ಯವಾಗಿರಲಿಲ್ಲ. ಏಕೀಕರಣದ ಏಕರೂಪ ಚಳವಳಿ ವಿರೋಧಾಭಾಸದ ವೈರುಧ್ಯಗಳಿಂದ ಕೂಡಿ ಕರ್ನಾಟಕ ರಾಜ್ಯವಾಯಿತು ಎಂದು ತಿಳಿಸಿದರು.

ಆಧುನಿಕ ಮುದ್ರಣ ಯಂತ್ರಗಳ ಸಹಾಯದಿಂದ ಬ್ರಿಟಿಷರು ಧಾರ್ಮಿಕ ವಲಯದಿಂದ ಪುಸ್ತಕಗಳನ್ನು ಜಾತ್ಯತೀತ ವಲಯಕ್ಕೆ ತಂದರು. ಕ್ರಿಶ್ಚಿಯನ್ ಮಿಷನರಿಗಳಲ್ಲಿ ಕನ್ನಡದ ಅರಿವನ್ನು ಮೂಡಿಸುವ ಕಾರ್ಯಗಳು ಚುರುಕುಗೊಂಡವು ಎಂದು ತಿಳಿಸಿದರು.

ಕ್ರಿಶ್ಚಿಯನ್ ಮಿಷನರಿಗಳಲ್ಲಿ ಮತಾಂತರದ ಹೊರತಾಗಿ ಕನ್ನಡ ಭಾಷೆಯನ್ನು ಬೆಳೆಸುವ ಅರಿವಿನ ಕೆಲಸ ಪ್ರವೃತ್ತಿಯಾಯಿತು. ಆಲೂರು ವೆಂಕಟರಾವ್ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಉದಾರ ಮನೋಭಾವ, ಮಾಸ್ತಿ ವೆಂಕಟೇಶಅಯ್ಯಂಗಾರ್ ಅವರಿಗಿದ್ದ ಪ್ರಾಯೋಗಿಕ ಮನಸ್ಥಿತಿ, ಕುವೆಂಪು ಅವರ ಭಾಷಾ ಪ್ರಬುದ್ಧತೆ ಕನ್ನಡವನ್ನು ಶಿಖರಕ್ಕೇರಿಸಿತು ಎಂದರು.

ಲೇಖಕ ಪ್ರೊ.ಚಂದನ್‌ಗೌಡ ಪುಸ್ತಕದ ಕುರಿತು ಮಾತನಾಡಿ, ರಾಜ್ಯ ಮತ್ತು ಭಾಷೆಯ ಅಸ್ಮಿತೆ ಕುರಿತು ಗಂಭೀರವಾಗಿ ವಿಚಾರ ಮಾಡಬೇಕಿದೆ. ಬ್ರಿಟಿಷರು ತೊರೆದ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಷ್ಟ್ರ ಮಾಡುವುದರಲ್ಲಿ ಎಷ್ಟರ ಮಟ್ಟಿಗೆ ಸಫಲರಾದೆವು ಎಂಬುದು ಪ್ರಶ್ನಾರ್ಥಕ. ರಾಜಕೀಯದಿಂದ ಸಮುದಾಯಗಳಲ್ಲಿ ಸಮಾನತೆ ಮಾಯವಾಗಿದೆ ಎಂದರು.

ಕುವೆಂಪು ಅವರ ‘ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು’, ‘ವಿಶ್ವಮಾನವ’ ಸಂದೇಶ ಈಗಿನ ಕಾಲಕ್ಕೆ ಎಷ್ಟು ಪ್ರಸ್ತುತವೆಂದು ಆಲೋಚಿಸುವ ಸಂದರ್ಭವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಚಾರಿತ್ರಿಕವಾಗಿ ತೊರಿಸುವ ಅಧ್ಯಯನಗಳಿಗೆ ಕೊರತೆಯಿದೆ. ಕರ್ನಾಟಕ ರಾಜ್ಯ ಪೂರ್ವಸಿದ್ಧತೆಯಾಗಿರಲಿಲ್ಲವೆಂಬ ಸತ್ಯ ಈಗಲಾದರೂ ಅರಿಯಬೇಕಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎನ್.ಎಸ್. ಗುಂಡೂರ, ಅಧ್ಯಯನ ಪೀಠಗಳು ಕಾರ್ಯಪ್ರವೃತ್ತರಾಗಬೇಕು. ಅಧ್ಯಯನಶೀಲ ಚರ್ಚೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯದ ಕುರಿತು ವಿಚಾರ ಸಂಕಿರಣಗಳಾಗಬೇಕು. ಕನ್ನಡದ ಬೌದ್ಧಿಕ ಲೋಕಕ್ಕೆ ಅಧ್ಯಯನದ ಕೊರತೆಯಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular