Saturday, October 19, 2024
Google search engine
Homeಜಿಲ್ಲೆತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್- 3 ದಿನ ಭಾರೀ ಮಳೆ ಸಾಧ್ಯತೆ

ತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್- 3 ದಿನ ಭಾರೀ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಗುಡುಗು-ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ 3 ದಿನಗಳ ಕಾಲ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಡಿಸಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಭಾರಿ ಮಳೆಯಿಂದ ಉಂಟಾಗಬಹುದಾದ ಪ್ರವಾಹದಿಂದ ಯಾವುದೇ ಜನ-ಜಾನುವಾರುಗಳ ಜೀವಹಾನಿಯಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿ ಹೊಂದಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಾರಿ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಮಳೆ ಮುನ್ನಚ್ಚರಿಕೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಬೇಕು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂಭವವಿರುತ್ತದೆ. ಇದರಿಂದ ಸಾವು-ನೋವುಗಳು ಉಂಟಾಗಬಹುದಾದ್ದರಿಂದ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದ್ದಾರೆ.

ರಾಜ್ಯ/ಜಿಲ್ಲಾಡಳಿತ/ತಾಲ್ಲೂಕು ಆಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಗ್ರಾಮ ಪಂಚಾಯತಿಯ ವಿಪತ್ತು ನಿರ್ವಹಣಾ ಸಮಿತಿಗಳು ಪ್ರತಿ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ನದಿ/ಹಳ್ಳದ/ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ/ಕರುಗಳನ್ನು ಮೇಯಿಸುವುದು, ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು, ಮತ್ತಿತರೆ ಚಟುವಟಿಕೆಗಳನ್ನು ನಡೆಸಬಾರದು. ನದಿ/ಹಳ್ಳ/ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಪೋಟೋ/ಸೆಲ್ಫಿಗಳನ್ನು ತೆಗೆಯಬಾರದು. ಮಕ್ಕಳು ಮತ್ತು ವಯೋವೃದ್ಧರನ್ನು ಮನೆಯಿಂದ ಹೊರಗಡೆ ಒಂಟಿಯಾಗಿ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಕೆರೆ-ಕಟ್ಟೆಗಳ ಏರಿ/ಬಂಡ್/ಕೋಡಿಗಳಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ/ನಿಂತಿದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್ ಲೈನ್/ಕಂಬ ಬಿದ್ದಿದ್ದಲ್ಲಿ, ಮನೆಯೊಳಗಡೆ ನೀರು ನುಗ್ಗಿದಲ್ಲಿ, ಮನೆ ಗೋಡೆ/ಮೇಲ್ಛಾವಣಿ ಬಿದ್ದಿದ್ದಲ್ಲಿ, ಬೆಳೆ ನಷ್ಟವಾಗಿದ್ದಲ್ಲಿ, ಇತರೆ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಾದ 7304975519 ಕರೆ ಮಾಡಿ ನೆರವು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular