ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಎಂದಿಗೂ ಸಾಧ್ಯವಿಲ್ಲ. ಬಿಜೆಪಿ ಮತ್ತು ಆರ್.ಎಸ್.ಎಸ್. ಸೇರಿ ತಮಗೆ ಮತ ನೀಡಿದ ದಕ್ಷಿಣ ಭಾರತವನ್ನು ವಾಮ ಮಾರ್ಗದಿಂದ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳಲು ನಡೆಸುತ್ತಿರುವ ಹುನ್ನಾರ ಇದಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್ ತಿಳಿಸಿದರು.
ತುಮಕೂರಿನ ನೆಲಸಿರಿ ಸಾಂಸ್ಕೃತಿಕ ವೇದಿಕೆ ಮತ್ತು ತುಮಕೂರು ವಿವಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಜಿ.ಶ್ರೀನಿವಾಸಕುಮಾರ್ ನೆನಪಿನ ಸಂವಾದ ಹಾಗೂ ಪ್ರಬಂಧಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ದೇಶ, ಒಂದು ಭಾಷೆ ವಿಫಲವಾದಂತೆ, ಒಂದು ರಾಷ್ಟ್ರ, ಒಂದು ಚುನಾವಣೆಯೂ ವಿಫಲವಾಗಲಿದೆ. ಹಾಗೆಯೇ ಸರ್ಕಾರದ ಅಂಗಗಳಾದ ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆ, ಆದರೆ ನ್ಯಾಯಾಂಗದ ಮುಖ್ಯಸ್ಥರಾದ ಜೆಸ್ಟೀಸ್ ಚಂದ್ರಚೂಡ ಅವರು ಗಣಪತಿ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿಯನ್ನು ಬರಮಾಡಿಕೊಂಡು ಈ ದೇಶಕ್ಕೆ ಕೆಟ್ಟ ಸಂದೇಶ ನೀಡಿದ್ದಾರೆ. ಇದೊಂದು ಅಸಂವಿಧಾನಿಕ ಕ್ರಿಯೆ. ಎಲ್ಲರೂ ವಿದ್ಯಾವಂತರಾಗಿ, ಜಾತಿ ಮೀರಿ ಒಂದಾಗುವ ಮನಸ್ಸು ಮಾಡಿದಾಗ ಮಾತ್ರ ಜಾತಿ ವಿನಾಶ ಸಾಧ್ಯ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಮಾನತೆಗೆ ಶಿಕ್ಷಣವೊಂದೇ ಸರಿಯಾದ ಮಾರ್ಗ ಎಂಬುದನ್ನು ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯ ವೇಳೆ ಎಲ್ಲಾ ವರ್ಗಗಳಿಗೂ ಶಿಕ್ಷಣ ದೊರೆಯುವಂತಹ ಕಲಂಗಳನ್ನು ಸೇರಿಸುವ ಮೂಲಕ ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ನ್ಯಾಯ ದೊರಕಿಸುವತ್ತ ದಾಪುಗಾಲು ಇಟ್ಟಿದ್ದರು ಎಂದರು.
ಅಂಬೇಡ್ಕರ್ ಅವರ ಸಂವಿಧಾನದ ಆಶಯವನ್ನು ಸಮರ್ಪಕವಾಗಿ ಜಾರಿಗೆ ತರಲುವಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ಹೇಳಿದರು.
ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಮಧುಸೂಧನ್ ಆರ್., ಸಮೀನ ಬಾನು, ಅನುಷ ಜಿ. ಮತ್ತು ಮಮತ ಹೆಚ್.ಜಿ. ಅವರುಗಳಿಗೆ, ಪದವಿಪೂರ್ವ ವಿಭಾಗದಲ್ಲಿ ಕರಿಯಣ್ಣ, ಸೋಮರೆಡ್ಡಿ, ಕಾವ್ಯ.ಡಿ.ಕೆ, ಅಪೇಕ್ಷ ವಿ.ಎನ್.ಅವರಿಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಕರಿಯಣ್ಣ ವಹಿಸಿದ್ದರು. ನೆಲಸಿರಿ ಸಾಂಸ್ಕೃತಿಕ ವೇದಿಕೆಯ ನಟರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ವಕೀಲ ಹೆಚ್.ವಿ.ಮಂಜುನಾಥ್, ಹಿರಿಯ ಚಿಂತಕ ಕೆ,ದೊರೆರಾಜು, ಡಾ.ಬಸವರಾಜು, ನೆಲಸಿರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗಂಗಾಧರ ಬೀಚನಹಳ್ಳಿ, ಕಾರ್ಯದರ್ಶಿ ಮಲ್ಲಿಕಾ ಬಸವರಾಜು ಹಾಗೂ ಕಲಾ ಕಾಲೇಜಿನ ಉಪನ್ಯಾಸಕರು ಇದ್ದರು.