ಸಾಕಾಗಿದೆ.
ನೋಡಿ ನೋಡಿ.
ನೀರು ಕುಡಿದಿರೆಂದು
ಗಂಜಲದಿಂದ ತೊಟ್ಟಿ ತೊಳೆದಿರಿ.
ದೇವರ ಕೋಲು ಮುಟ್ಟಿದರೆಂದು
ದಂಡ ಕಟ್ಟಿಸಿದಿರಿ
ಶುದ್ಧೀಕರಿಸುವ ಲೋಕವೊಂದು
ನಮ್ಮ ಮುಂದೆ
ಜೀವ ತಳೆದು
ನಲಿಯುತಿದೆ
ಸಾಕಾಗಿದೆ
ನೋಡಿ ನೋಡಿ
ಮುಗ್ಧಲೋಕದ ಕಣ್ಣ ಹಿಸುಕಿ
ಪಿಸುರು ವರೆಸಿಕೊಳ್ಳುತ್ತ
ಸೋರುವ ನೀರನ್ನು ಎಡತೋಳಲ್ಲಿ ತೀಡಿಕೊಳ್ಳುತ್ತ
ಊರೊಳಗೆ ಬಾರದೆ
ಊರಾಚೆಯೇ ಲೋಕದ ನಿತ್ಯಕಾಯಕ ಮಾಡುವವರಿಗೆ
ಶುದ್ಧೀಕರಣವಿಲ್ಲ.
ಲೋಕ ಶುದ್ದಿ ಕಾಯಕದವರಿಗೆ ..
ಸಾಕಾಗಿದೆ
ನೋಡಿ ನೋಡಿ
ದೇವರು, ಗುಡಿಗಳು
ಇಲ್ಲಿ ಶುದ್ಧವಾಗುತ್ತವೆ
ಮಾಡಿದ ಪಾಪವ
ತೊಳೆಯಲು
ನೀರು ಪಾದೋದಕವೂ ಇಲ್ಲಿ
ಶೋಧವಾಗಿರುತ್ತದೆ
ಸಾಕಾಗಿದೆ
ನೋಡಿ ನೋಡಿ
ಸೈತಾನ್ ಗಳನ್ನು ಹೊಡೆದೋಡಿಸುವ
ಮಂತ್ರ ತಂತ್ರಗಳು ನಮ್ಮ
ಕೈವಶದಲ್ಲಿವೆ.
ಮುಟ್ಟಿದಾಕ್ಷಣವೇ ಮೈಯೆಲ್ಲಾ
ನಡುಗುತ್ತಾ ಕುಣಿದು
ಕುಣಿದು ಬಿದ್ದುರುಳಾಡುವ
ಕಲೆಯೂ ನಮ್ಮಲ್ಲಿದೆ
ತಿನ್ನುವ ಅನ್ನವನ್ನು
ಚರಂಡಿಗೆಸೆವ
ಕುಡಿವ ನೀರನ್ನು ಕೊಚ್ಚೆಗೆ
ಹರಿಯಬಿಟ್ಟು
ಗಂಜಲವನ್ನು ಕುಡಿದು
ಶುದ್ದೀಕರಿಸಿಕೊಳ್ಳುವೆವು
ಊರಿನಿಂದ ದೂರವಿಟ್ಟು
ಅಕ್ಷರವನ್ನು ಕತ್ತಲಲ್ಲಿಟ್ಟು
ಅಸ್ಪೃಶ್ಯರನ್ನೇ ಕೊಳಕಾಗಿಸಿರುವ
ಮನಸ್ಸುಗಳನ್ನು ಶುದ್ದೀಕರಿಸುವ
ಮಂತ್ರ ದಂಡವಾದರೂ ಎಲ್ಲಿದೆ?
ಪಾವನ ಮಾಡುವ ನೀರಾದರೂ ಎಲ್ಲಿ ಹರಿಯುತ್ತದೆ.
ಈ ಕಡೆಗೂ ತಿರುವಬೇಕು.
ಅದಾಗದಿದ್ದರೇ …
ಕನಿಷ್ಠ ಪಕ್ಷ
ಆ ನೀರನ್ನಾದರೂ
ಅಸ್ಪೃಶ್ಯರೇ ಮುಟ್ಟಿ
ಶುದ್ಧೀಕರಿಸಬೇಕಿದೆ.
ಡಾ.ರವಿಕುಮಾರ್ ನೀಹ, ಅಧ್ಯಾಪಕರು, ತುಮಕೂರು
(ತುಮಕೂರು ದಸರಾ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವನ)