Thursday, October 17, 2024
Google search engine
Homeಮುಖಪುಟಕಾಂತರಾಜು ವರದಿ ಜಾರಿಗೆ ಆಗ್ರಹ-ಅ.16ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಕಾಂತರಾಜು ವರದಿ ಜಾರಿಗೆ ಆಗ್ರಹ-ಅ.16ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಕಾಂತರಾಜು ಆಯೋಗದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಬಿಡುಗಡೆಗೊಳಿಸಿ, ಯಥವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಅ.16ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ರಾಮಚಂದ್ರಪ್ಪ  ಹಾಗೂ ಅನಂತನಾಯ್ಕ್ ಹೇಳಿದರು.

ತುಮಕೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಇಷ್ಟು ದಿನ ಮೇಲ್ವರ್ಗದ ಜನರು ರಾಜ್ಯದಲ್ಲಿ ನಮ್ಮದೇ ಜನಸಂಖ್ಯೆ ಹೆಚ್ಚಿದೆ ಎಂದು ಹೇಳಿಕೊಂಡು ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಮಂತ್ರಿಮಂಡಲದಲ್ಲಿ ಸಾಕಷ್ಟು ಸಚಿವ ಸ್ಥಾನಗಳನ್ನು ಪಡೆದುಕೊಂಡಿದ್ದರು. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಪಾಲು ಪಡೆದಿದ್ದರು. ಆದರೆ ಬಹುಸಂಖ್ಯಾತ ಜನರು ಅಧಿಕಾರ, ಉದ್ಯೋಗಗಳಿಂದ ವಂಚಿತರಾಗಿದ್ದಾರೆ, ಎಲ್ಲಾ ಜಾತಿ ಜನಾಂಗದವರಿಗೂ ಸಾಮಾಜಿಕ ಆರ್ಥಿಕ, ರಾಜಕೀಯ ,ಶೈಕ್ಷಣಿಕ ಪ್ರಾತಿನಿಧ್ಯ ಸಿಗಬೇಕು ಎಂದರೆ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂತರಾಜು ಆಯೋಗದ ವರದಿಯಿಂದ ಯಾವ ಜಾತಿಗೂ ಅನ್ಯಾಯವಾಗುವುದಿಲ್ಲ, ಅವರವರ ಜಾತಿ ಜನಸಂಖ್ಯೆ ಗೆ ಅನುಗುಣವಾಗಿ ಸರ್ಕಾರಿ ಸೌಲಭ್ಯಗಳು ಸೇರಿ, ಅಧಿಕಾರ ಹಂಚಿಕೆಯಲ್ಲಿ ಪ್ರಮುಖ ಪಾತ್ರವಹಿಸಲು ಈ ವರದಿ ಸಹಾಯವಾಗಲಿದೆ. ಕೆಲ ಮೇಲ್ವರ್ಗದ ಜನ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಜಾತಿ ಜನಗಣತಿ ಬಿಂಬಿಸುತ್ತಿದ್ದಾರೆ. ಜೊತೆಗೆ ಕಾಂತರಾಜ ವರದಿಯ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಆಕ್ಟೋಬರ್ 18 ರಂದು ಸಚಿವ ಸಂಪುಟ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕಾಂತರಾಜು ವರದಿ ಬಿಡುಗಡೆ ಮಾಡಿ ಯಥವತ್ತಾಗಿ ಜಾರಿ ಮಾಡಬೇಕು. ಈ ನೆಲದ ಕಾನೂನಿನ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೌರವ ಇದ್ದರೆ ವರದಿ ಜಾರಿಗೆ ವಿರೋಧ ಮಾಡಬಾರದು ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಹಿಂದುಳಿದ ಮುಖಂಡರಾದ ಕೆಂಪರಾಜು, ನರಸಿಂಯ್ಯ, ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ, ದಲಿತ ಮುಖಂಡರಾದ ಮುರುಳಿ ಕುಂದೂರು, ಶಿವನಂಜಪ್ಪ, ಎಡ್ವಿನ್, ಮಡಿವಾಳ ಸಮಾಜದ ಶಾಂತಕುಮಾರ್, ಕಾಂಗ್ರೆಸ್ ಎಸ್.ಸಿ.ಘಟಕದ ನರಸಿಂಹಮೂರ್ತಿ, ಅಲ್ಪಸಂಖ್ಯಾತರ ಮುಖಂಡ ಇರ್ಫಾನ್, ಕುರುಬರ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular