ಗ್ಯಾರೆಂಟಿ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರಿಗೆ ತಲುಪುತ್ತಿವೆ. ಇದಕ್ಕಾಗಿ ಸಾವಿರಾರು ಕೋಟಿ ಹಣವನ್ನು ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಸಿದ್ದರಾಮಯ್ಯ ಬಡಜನರ ಪರ ಇರುವುದರಿಂದ ಏನಾದರೂ ಮಾಡಿ ಅವರನ್ನು ಅಧಿಕಾರದಿಂದ ಇಳಿಸಬೇಕೆಂಬ ಹುನ್ನಾರ ನಡೆಯುತ್ತಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಸಂಚಾಲಕ ಎನ್. ಅನಂತ ನಾಯ್ಕ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ನ್ಯೂಸ್ ಕಿಟ್.ಕಾಂ ಜೊತೆ ಮಾತನಾಡಿದ ಅವರು, ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಬಂಗಾರಪ್ಪನವರಿಗೆ ತೊಂದರೆ ನೀಡಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರು. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಷಡ್ಯಂತ್ರ ನಡೆಸಲಾಯಿತು. ಇದು ಈಗಲೂ ಮುಂದುವರೆಯುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪ್ರಯೋಗಾತ್ಮಕ ರಾಜಕಾರಣಿ, ಜನಪರವಾದ ಕಾರ್ಯಕ್ರಮ, ಯೋಜನೆಗಳನ್ನು ನೀಡುತ್ತಿದ್ದಾರೆ. ಇದನ್ನು ವಿರೋಧ ಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದರೆ ಪ್ಯೂಡಲ್ ಮತ್ತು ಕೋಮುವಾದಿಗಳ ಕೈಗೆ ಅಧಿಕಾರದ ಸೂತ್ರ ಬರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಅಹಿಂದ ನಾಯಕನನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ವಿರೋಧ ಪಕ್ಷಗಳು ನಡೆಸುತ್ತಿರುವ ದಾಳ ಕೇವಲ ಸಿದ್ದರಾಮಯ್ಯ ಅವರ ಮೇಲೆ ನಡೆಯುತ್ತಿರುವ ದಾಳಿಯಲ್ಲ. ಇದು ಸಮಸ್ತ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಯಾಗಿದೆ ಎಂದು ಆಪಾದಿಸಿದರು.
ಮುಡಾ ನೆಪವಿಟ್ಟುಕೊಂಡು ಅಹಿಂದ ನಾಯಕನನ್ನು ಮುಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲು ರಾಜಭವನವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ಆದರೂ ಅವರು ಮಹಾನ್ ಅಪರಾಧ ಮಾಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ರಾಜಿನಾಮೆ ಕೊಡುವಂತಹ ಮಹಾ ಅಪಾರದ ಮಾಡಿಲ್ಲ. ರಾಜಿನಾಮೆ ನೀಡುವಂತಹ ಅನಿವಾರ್ಯತೆಯೂ ಕೂಡ ಉದ್ಭವಿಸುವುದಿಲ್ಲ. ಶೋಷಿತ ಸಮುದಾಯಗಳು ಮತ್ತು ಪ್ರಜ್ಞಾವಂತರು ಸಿದ್ದರಾಮಯ್ಯ ಜೊತೆಗೆ ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರಪ್ಪ, ಕೆಂಪರಾಜು ಇದ್ದರು.