ಭಾರತದ ಬಹುತ್ವ ಸಂಸ್ಕೃತಿಯನ್ನು ತಿಳಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಕುವೆಂಪು ಅವರಂತಹ ದಾರ್ಶನಿಕರ ವಿಚಾರಧಾರೆಗಳನ್ನು ಉಳಿಸಲು ಸಮತೆ-ಮಮತೆಗಳ ಪರಂಪರೆ ಅಗತ್ಯ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತುಮಕೂರು ದಸರಾ ಉತ್ಸವ ಅಂಗವಾಗಿ ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಹಾಗೂ ವೀಚಿ ವೇದಿಕೆಯಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಂಪರೆ ಎಲ್ಲಾ ಕಾಲದಲ್ಲಿಯೂ ಬೆಳವಣಿಗೆ ಹೊಂದುತ್ತಾ ಬರುತ್ತಿದ್ದು, ಸಂಸ್ಕೃತಿ ಮತ್ತು ಪರಂಪರೆಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಬರವಣಿಗೆ ಸಂಸ್ಕೃತಿಯ ಜೊತೆ-ಜೊತೆಗೆ ಜನಮೂಲ ಸಂಸ್ಕೃತಿಯನ್ನು ತಿಳಿದಾಗ ಮಾತ್ರ ಈ ನೆಲದ ಮೂಲ ಪರಂಪರೆಯ ನೆಲೆಗಟ್ಟನ್ನು ನೋಡಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲೆಯು ಕನ್ನಡ ಭಾಷೆ ಹಾಗೂ ರಾಜ್ಯಕ್ಕೆ ಹಲವು ಮೊದಲುಗಳನ್ನು ನೀಡಿದೆ. ಕನ್ನಡದ ಮೊದಲ ನಾಟಕ ಸಂಸ್ಥೆ, ಕನ್ನಡ ಮೊದಲ ಟಾಕಿ ಸಿನಿಮಾಗೆ ಚಿತ್ರಕಥೆ, ಸಾಹಿತ್ಯ, ಬರವಣಿಗೆ ಸೇರಿದಂತೆ ಕಲೆ, ವಿಜ್ಞಾನ, ಸಾಹಿತ್ಯ, ಸಿನಿಮಾ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇರುವುದರಿಂದ ಜಿಲ್ಲೆಯ ಸಾಧಕರನ್ನು ಕುರಿತು ತಿಳಿಸುವಂತಹ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಮಾಜದಲ್ಲಿನ ಆಗು-ಹೋಗುಗಳ ಕುರಿತು ತಮ್ಮದೆ ಆದ ದೃಷ್ಟಿಕೋನದಲ್ಲಿ ವಿಮರ್ಶಿಸುವ ಸಾಹಿತಿಗಳು ಸಮಾಜದ ನಿಜವಾದ ಸಾಕ್ಷಿಪ್ರಜ್ಞೆಗಳಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ. ಟಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು, ಎಸ್.ಪಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಸಾಹಿತಿ ನಾಗಭೂಷಣ ಬಗ್ಗನಡು, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಚಿತ್ರ ಕಲಾವಿದರಾದ ಕೋಟೆಕುಮಾರ್, ಪ್ರಭು ಹರಸೂರು, ಲಕ್ಷ್ಮಣ್ ದಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಇತರರು ಇದ್ದರು.