ಇಡೀ ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ. ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ? ಇದು “ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ” ಹಾಗಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ನೀಡುವುದೇ ದಸರೆಯ ಸಂದೇಶ. ವಿಜಯನಗರ ಅರಸರು ವಿಜಯದ ಸಂಕೇತವಾಗಿ ಪ್ರಾರಂಭಿಸಿರುವ ಆಯುಧಪೂಜೆ – ದಸರಾ ಉತ್ಸವವನ್ನು ಮೈಸೂರು ಒಡೆಯರು ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ ಎಂದರು.
ಜನಪರವಾಗಿರುವ ನಮ್ಮ ಸರ್ಕಾರವನ್ನು ದುಷ್ಟರಿಂದ ರಕ್ಷಿಸು ಎಂದು ಜಾಹೀರಾತಿನ ಮೂಲಕ ಪ್ರಾರ್ಥಿಸಲಾಗಿದೆ. ಇದು ದಸರಾದ ಆಶಯವೂ ಆಗಿದೆ ಎಂದು ಹೇಳಿದರು.
ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ, ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪಸಮಿತಿಗಿರುತ್ತದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಹುಬ್ಬಳ್ಳಿ ಗಲಭೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ. ಬಿಜೆಪಿಯವರು ಕೇವಲ ಸುಳ್ಳು ವಿಚಾರಗಳ ಆಧರಿಸಿಯೇ ಹೋರಾಟ ಮಾಡುತ್ತಾರೆ. ಸತ್ಯದ ಪರವಾಗಿ ಅವರ ಹೋರಾಟ ಎಂದಿಗೂ ಕಾಣಸಿಗುವುದಿಲ್ಲ ಎಂದು ಹೇಳಿದ್ದಾರೆ.