ಕುಂಚಿಟಿಗ ಸ್ವಾಮಿಗಳನ್ನು ಪರಸ್ಪರ ಸೇರಿಸುವ ಮಹತ್ಕಾರ್ಯ ಮಾಡಬೇಕೆ ಹೊರತು ಸ್ವಾಮಿಗಳ ಮಧ್ಯೆ ಕಲಹ ತಂದಿಟ್ಟು ವಿಕೃತ ಸಂತೋಷ ಪಡಬೇಡಿ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕುಂಚಗಿರಿ ಸಂಸ್ಥಾನ ಮಠದ ಅಧ್ಯಕ್ಷ ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಡೆದ ಕಳಸ ಪ್ರತಿಷ್ಠಾಪನೆ, ಮಹದ್ವಾರ ಉದ್ಘಾಟನಾ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ಕುಂಚಿಟಿಗ ಸಮಾಜದ ಅನೇಕ ಸಮಸ್ಯೆಗಳು ಪರಿಹಾರವಾಗದೆ ಇರಲು ಗುರುಗಳು ಮತ್ತು ಭಕ್ತರ ಮಧ್ಯೆ ಇರುವ ಗುಂಪುಗಾರಿಕೆ, ಪ್ರತಿಷ್ಠೆ ಮತ್ತು ಪೈಪೋಟಿಯಿಂದ ಸಮಾಜ ನಲುಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗುರುಗಳತ್ರ ಒಂದು ಬಣ ಚಾಡಿ ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಠಾಧೀಶರನ್ನು ಬಳಸಿಕೊಂಡು ಕುಂಚಿಟಿಗ ಸಮಾಜದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಕುಂಚಿಟಿಗರು ಒಗ್ಗಟ್ಟಾಗಲು ಭಕ್ತರು ಮತ್ತು ಸ್ವಾಮಿಗಳು ಪರಸ್ಪರ ರಾಗ-ದ್ವೇಷಗಳನ್ನು ಬಿಟ್ಟು ಸಮಾಜದ ಏಳಿಗೆಗೆ ಕಂಕಣ ತೊಡಲು ಇದು ಸರಿಯಾದ ಸಮಯ.
ಸಣ್ಣಪುಟ್ಟ ಸಮುದಾಯಗಳು ಗೊಂದಲವಿಲ್ಲದೆ ಸಂಘಟನೆ ಆಗುತ್ತಿವೆ.ಇದನ್ನು ನೋಡಿಯೂ ಸಂಘಟನೆಯಾಗದಿದ್ದರೆ ಸ್ವಾಮಿಗಳಾದ ನಾವು ಪ್ರತಿಷ್ಠೆ ಬಿಡದಿದ್ದರೆ ನಮ್ಮಲ್ಲಿರುವಂಥ ಬಡವರಿಗೆ ನಾವೇ ದ್ರೋಹ ಮಾಡಿದಂತೆ. ಇದನ್ನು ಕುಂಚಿಟಿಗ ಸಮಾಜದ ಸಂಘಟನೆಗಳು ಅರ್ಥೈಸಿಕೊಂಡು ಕುಂಚಿಟಿಗ ಸಮಾಜದ ಅಭಿವೃದ್ಧಿಗೆ, ಸಂಘಟನೆಗೆ ಗುರುಗಳು ಮತ್ತು ಭಕ್ತರು ಪರಸ್ಪರ ಸೌಹಾರ್ದತೆಯಿಂದ ಹೆಜ್ಜೆ ಹಾಕಿದರೆ ಮಾತ್ರ ಕುಂಚಿಟಿಗ ಸಮಾಜ ಸಂಘಟನೆಯಾಗಿ ಸಾಮಾಜಿಕ ನ್ಯಾಯ ಮೀಸಲಾತಿಯನ್ನು ಪಡೆಯಲು ಸಾಧ್ಯ ಎಂದರು.
ನಂಜಾವಧೂತ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಅವರನ್ನು ದೂರುವ ಬದಲು ಅವರೊಂದಿಗೆ ಕುಳಿತು ಸಮಾಜದ ಸ್ಥಿತಿಗತಿಗಳನ್ನು ಭಿನ್ನವಿಸಿಕೊಂಡು ಭಿನ್ನಾಭಿಪ್ರಾಯಗಳನ್ನು, ಭಿನ್ನ ನಿಲುವುಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಕುಂಚಿಟಿಗ ಸಮಾಜದ ನಾಯಕರುಗಳು, ರಾಜಕಾರಣಿಗಳು, ಭಕ್ತರು ಶ್ರಮವಹಿಸಿ, ಇಲ್ಲದಿದ್ದರೆ ಸಮಾಜ ಒಂದು ದಿಕ್ಕಿನಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ಒಬ್ಬರ ಮಧ್ಯೆ ಒಬ್ಬರಿಗೆ ಜಗಳ ತಂದಿಡುವ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.