ವಿದ್ಯುತ್ ಇಲಾಖೆ ಖಾಸಗೀಕರಣದ ನೆಪದಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ಮಾಡಲು ಹೋರಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ವಿದ್ಯುತ್ ದರ ಹೆಚ್ಚಳ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ನೇತೃತ್ವದಲ್ಲಿ ನೂರಾರು ರೈತರು ನಗರದ ಟೌನ್‌ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಕೋತಿ ತೋಪಿನಲ್ಲಿರುವ ಬೆಸ್ಕಾಂ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ, ರಾಜ್ಯ ಸರ್ಕಾರ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ಮಾಡಿ, ಸ್ಮಾರ್ಟ ಮೀಟರ್ ಅಳವಡಿಸಲು ಮುಂದಾಗಿದೆ. ಇದು ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಉಚಿತವಾಗಿ ಸಿಗುವ ವಿದ್ಯುತ್ ಬಳಸಿಕೊಂಡು ರೈತರು ತಮ್ಮ ತೋಟ ತುಡಿಕೆ, ಭತ್ತ ಬೆಳೆದು ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ರೈತರು ತಮ್ಮ ದುಡಿಮೆಯ ಹಣವನ್ನೆಲ್ಲಾ ವಿದ್ಯುತ್ ಬಿಲ್ ಕಟ್ಟಲೇ ಬಳಸಬೇಕಾದ ಪರಿಸ್ಥಿತಿ ಉದ್ಬವಿಸುವ ಸಾಧ್ಯತೆ ಇದೆ. ಹಾಗಾಗಿ ಆಧಾರ್ ಜೋಡಣೆ ಮತ್ತು ಸ್ಮಾರ್ಟ ಮೀಟರ್ ಅಳವಡಿಕೆ ಬಿಡಬೇಕೆಂಬುದು ಒತ್ತಾಯಿಸಿದರು.
ರಾಜ್ಯ ಸರ್ಕಾರ 2023ಕ್ಕೂ ಮೊದಲು ರೈತರು ಕೊಳವೆ ಬಾವಿಗಳಿಗೆ ಲೈನ್ ಎಳೆದು, ಸಂಪರ್ಕ ನೀಡಲು ರೈತರಿಂದ ಕಡಿಮೆ ವಂತಿಗೆ ಪಡೆದು, ಕೆಲಸ ನಿರ್ವಹಿಸುತ್ತಿತ್ತು. ಈಗ ಸರ್ಕಾರ ಇಡೀ ಯೋಜನೆಯ ಸಂಪೂರ್ಣ ವೆಚ್ಚವನ್ನು ರೈತರೇ ಭರಿಸಬೇಕೆಂದು ಆದೇಶ ಮಾಡಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.ಒಂದು ಸಂಪರ್ಕ ಪಡೆಯಲು ರೈತರು ಲಕ್ಷಾಂತರ ರೂ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಂದ ಇದು ಸಾಧ್ಯವಿಲ್ಲ. ಹಾಗಾಗಿ ಈ ಹಿಂದಿನಂತೆ ಸರ್ಕಾರವೇ ಎಲ್ಲಾ ವೆಚ್ಚ ಭರಿಸಿ ರೈತರಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಸರ್ಕಾರ ಗ್ಯಾರಂಟಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿ, ಇನ್ನೊಂದೆಡೆ ವಿದ್ಯುತ್ ದರ ಹೆಚ್ಚಳ ಮಾಡಿದೆ. ಇದರಿಂದ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ಕಸಿದು ಕೊಂಡಿದೆ. ಹಾಗಾಗಿ ವಿದ್ಯುತ್ ಯೂನಿಟ್ ದರ ಹೆಚ್ಚಳ ಹಿಂಪಡೆಯಬೇಕು ಎಂಬುದು ರೈತರ ಆಗ್ರಹವಾಗಿದೆ. ಹಾಗೆಯೇ ಸೋಲಾರ್ ಪಂಪಸೆಟ್ ಅಳವಡಿಸಿಕೊಂಡ ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ಸಂಪರ್ಕ ತೆಗೆಯಲು ಮುಂದಾಗಿದೆ. ಚಳಿಗಾಲದಲ್ಲಿ ಮಳೆಯು ಬಾರದು, ಬೀಸಿಲು ಬಾರದು. ಇಂತಹ ಸಮಯದಲ್ಲಿ ರೈತರು ನೀರಿಗಾಗಿ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಈ ಸಂಬಂಧ ಮನವಿಯನ್ನು ಬೆಸ್ಕಾಂ ಇಇ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ಜಿಲ್ಲಾ ಗೌರವಾಧ್ಯಕ್ಷ ಲೋಕೇಶ್ , ತೋಂಟಾರಾಧ್ಯ, ನಾಗಣ್ಣ ಕಂದಿಕೆರೆ, ಲೋಕಣ್ಣ ಬಂಡಿಮನೆ, ಸಿದ್ದರಾಜು ಕೊರಟಗೆರೆ, ಎ.ವಿ.ಪುಟ್ಟರಾಜು, ಸಣ್ಣ ದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ನಾಗೇಂದ್ರ, ಅನಿಲ್, ರಾಜಣ್ಣ, ಕೆ.ಎನ್.ಚಂದ್ರೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.