Monday, September 16, 2024
Google search engine
Homeಮುಖಪುಟಜಿ.ಎಂ.ಶ್ರೀನಿವಾಸಯ್ಯ ಎಂಬ ಸಮಚಿತ್ತದ ಹಿರಿಯರು

ಜಿ.ಎಂ.ಶ್ರೀನಿವಾಸಯ್ಯ ಎಂಬ ಸಮಚಿತ್ತದ ಹಿರಿಯರು

ನಾವು ಕನ್ನಡ ಎಂಎ ಓದುವಾಗ ತುಮಕೂರಿನಲ್ಲಿ ಬರಗೂರು ಮೇಷ್ಟ್ರು ಒತ್ತಾಸೆಯಿಂದ ಸ್ನಾತಕೋತ್ತರ ಕೇಂದ್ರ ಶುರುವಾಗಿತ್ತು. ಕನ್ನಡ, ಇತಿಹಾಸ, ಗಣಿತ, ಮತ್ತು ವಾಣಿಜ್ಯ ವಿಭಾಗಗಳನ್ನು ತೆರೆಯಲಾಗಿತ್ತು. ನಮ್ಮ ಕನ್ನಡ ವಿಭಾಗದ ಪಕ್ಕದಲ್ಲೇ ಇತಿಹಾಸ ವಿಭಾಗವಿತ್ತು. ಅಲ್ಲಿಗೆ ನಿವೃತ್ತರಾದ ಮೇಲೆ ಜಿಎಂಎಸ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಬರುತ್ತಿದ್ದರು. ಅಲ್ಪಸ್ವಲ್ಪ ಪರಿಚಯವಿತ್ತು.

1999 ರಲ್ಲಿ ಮೇಷ್ಟ್ರು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು ಅರಳುಗುಪ್ಪೆ, ಗುಬ್ಬಿ ಹೊಸಹಳ್ಳಿ ಗ್ರಾಮಗಳಿಗೆ ಕ್ಷೇತ್ರಕಾರ್ಯಕ್ಕೆ ಕರೆದೊಯ್ದಿದ್ದರು. ಆಗ ಜಿ ಎಂ ಎಸ್ ನಮ್ಮ ಜೊತೆಯಿದ್ದು ಅರಳುಗುಪ್ಪೆಯ ಐತಿಹಾಸಿಕ ಮಹತ್ವ ತಿಳಿಸಿದ್ದರು.

ತುಮಕೂರು ವಿಶ್ವವಿದ್ಯಾಲಯ ಎಂದು ನಾಮಕರಣಗೊಂಡಾಗ ಕೋಲಾರ, ಚಿತ್ರದುರ್ಗ ಜಿಲ್ಲೆಯಲ್ಲಿ “ನಾವು ತುಮಕೂರು ವಿವಿಗೆ ಸೇರುವುದಿಲ್ಲ, ಇದು ರದ್ದಾಗಲಿ” ಎಂದು ಕೋಲಾರ ಚಿತ್ರದುರ್ಗದಲ್ಲಿ ಹೋರಾಟ ಶುರುವಾಗಿತ್ತು.

ಅಂತಿಮ ಹಂತದಲ್ಲಿ ತುಮಕೂರು ವಿಶ್ವವಿದ್ಯಾಲಯ ರದ್ದಾಗುವ ಸುದ್ಧಿ ಹರಡಿದಾಗ “ವಿಶ್ವವಿದ್ಯಾಲಯ ಉಳಿಸಿ ಹೋರಾಟ” ದಲ್ಲಿ ಹೆಚ್ಚು ಸಂಪರ್ಕಕ್ಕೆ ಬಂದೆವು.

ಜಿ ಎಂ ಎಸ್, ಕೆ. ದೊರೆರಾಜು, ಬಿ ಎ ಚಿದಂಬರಯ್ಯ ಮುಂತಾದ ಹಿರಿಯರು. ಯುವಕರಾದ ನಾನು, ಬೆಂಕಿ ತಿಮ್ಮಯ್ಯ, ಶಿವಣ್ಣ ತಿಮ್ಮಾಪುರ, ಬೀರಂ ಜಗದೀಶ್, ಕೆ. ಈ.ಸಿದ್ಜಯ್ಯ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮತ್ತಿತ್ತರರು ವಿಶ್ವವಿದ್ಯಾಲಯದ ಉಳಿಸಿ ಹೋರಾಟ, ಮತ್ತು ಕಾವಲುಸಮಿತಿ ಸದಸ್ಯರಾಗಿ ಹೋರಾಟ ನಡೆಸುತ್ತಿದ್ದೆವು.

ನಮ್ಮ ಮತ್ತು ಹಿರಿಯ ಗುಂಪಿನ ನಡುವೆ ತಾತ್ವಿಕ ಸಂಘರ್ಷಗಳಾಗುತ್ತಿದ್ದವು. ನಾವೆಲ್ಲ ಈ ಕ್ಷಣದಲ್ಲೇ ಎಲ್ಲವೂ ಸಂಭವಿಸಬೇಕೆಂದು ಹಾತೊರೆಯುತ್ತಿದ್ದರೆ ಜಿ ಎಂ ಎಸ್ ತಾಳ್ಮೆಯಿರಲಿ ಎಂದು ಸಮಾಧಾನ ಮಾಡುತ್ತಿದ್ದರು. ಒಪ್ಪದ ನಮ್ಮ ಅವರ ನಡುವೆ ಕಾವಲು ಸಮಿತಿ ಒಡೆದು ಹೋಗುವ ಸನ್ನಿವೇಶ ನಿರ್ಮಾಣವಾಯಿತು. ಪತ್ರಿಕೆಯಲ್ಲೂ ದೊಡ್ಡ ಸುದ್ಧಿಯಾಯಿತು. “ಕಾವಲು ಸಮಿತಿಯ ಯುವ ಸದಸ್ಯರು ಹಿರಿಯ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು” ಅಂತ ಸುದ್ದಿಯಾದಾಗ (ಕನ್ನಡ ಪ್ರಭ) ಹಿರಿಯರು ನೊಂದುಕೊಂಡಿದ್ದರು.

ಜಿ ಎಂ ಎಸ್ ಒಮ್ಮೆ ಸಿಕ್ಕಿ ಏನ್ರಪ್ಪಾ ತರಾಟೆಗೆ ತೆಗೆದುಕೊಂಡವರೇ ಎನ್ನುತ್ತಿದ್ದರು. ಮುನಿಸು ಮುಂದುವರಿಯುತ್ತಲೇ ಇತ್ತು.

ಇದಾದ ಮೂರು ವರ್ಷಗಳ ನಂತರ ನಾನು ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅತಿಥಿ ಅಧ್ಯಾಪಕನಾಗಿ ಸೇರಿಕೊಂಡಾಗ ಅವರ ಮತ್ತು ನನ್ನ ನಡುವೆಯಿದ್ದ ಗೋಡೆ ಕಳಚಿತು. ಸಾಹಿತ್ಯ, ಇತಿಹಾಸ ಕುರಿತ ಚರ್ಚೆ ನಡೆಯುತ್ತಿತ್ತು. ಅವರ ಒತ್ತಾಯದಲ್ಲೇ ಇತಿಹಾಸ ಕಾಂಗ್ರೇಸ್ ಗೆ “ದೊಡ್ಡಪಾಲನಹಳ್ಳಿ ಕುಮಾರರಾಮ- ಐತಿಹಾಸಿಕ ಸಾಂಸ್ಕೃತಿಕ ನೋಟ” ಎಂಬ ಪ್ರಬಂಧ ಮಂಡಿಸಿದ್ದೆ. ಹೋರಾಟ, ಚಿಂತನೆ, ಮಾತು, ಸಮಚಿತ್ತತೆಯಿಂದ ಕೂಡಿದ್ದ ಅವರು ವಿಶ್ವವಿದ್ಯಾಲಯದ ಹೋರಾಟಕ್ಕೆ ಶ್ರಮಿಸಿದರು. ಅವರ ಹೋರಾಟ, ತಾಳ್ಮೆ, ಸಹಾನುಭೂತಿಯ ಮಾತುಗಳು ನಮ್ಮ ಹೋರಾಟಗಳಿಗೆ ಸ್ಪೂರ್ತಿದಾಯಕವಾಗಿವೆ. ಇವರನ್ನು ಕುರಿತು ಕೆ.ಈ ಸಿದ್ದಯ್ಯ ಒಂದು ಚಿಕ್ಕ ಅನುಭವ ಬರಹವನ್ನು ಬರೆದು ಪ್ರಕಟಿಸಿದ್ದರು.

ಜಿ ಎಂ ಎಸ್ ಇತಿಹಾಸ ವಿಭಾಗದಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವರು. ಈಗಿನ ತುಮಕೂರು ವಿಶ್ವವಿದ್ಯಾಲಯ ಇಂಥ ಹಿರಿಯರ ಶ್ರಮದಲ್ಲಿ ಉಳಿದಿದೆ. ವಿಶ್ವವಿದ್ಯಾಲಯ ಜಿ ಎಂ ಎಸ್ ಅವರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಬೇಕು.

ಡಾ. ರವಿಕುಮಾರ್ ನೀ.ಹ. ಲೇಖಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular