ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು ಬೆಂಗಳೂರಿನ ವಿಧಾನಸೌಧದ ಸಮೀಪ ಇರುವ ಗಾಂಧೀ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ರಾಜಭವನದವರೆಗೂ ಕಾಲ್ನಡಿಗೆಯಲ್ಲಿ ನಡೆಸಿದ ಸಚಿವರು ಮತ್ತು ಶಾಸಕರು, ರಾಜ್ಯಪಾಲರ ನಡೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಪಾಲರ ಕಚೇರಿ ಒಂದು ಪಕ್ಷದ ಕಚೇರಿ ಆಗಬಾರದು, ಇದೊಂದು ಸಂವಿಧಾನದ ಪೀಠ, ಸಂವಿಧಾನಬದ್ದವಾಗಿ ನ್ಯಾಯವಾಗಿ ನಡೆದುಕೊಳ್ಳಬೇಕು. ರಾಜ್ಯಪಾಲರ ಕಚೇರಿ ಸಮಾನತೆಗೆ ಹೆಸರಾಗಿರಬೇಕು. ಸಂವಿಧಾನಕ್ಕೆ ಗೌರವ ಕೊಡಬೇಕು. ಆದರೆ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ವಿಚಾರದಲ್ಲಿ ಒಂದೇ ದಿನದಲ್ಲಿ ನೋಟೀಸನ್ನು ಕೊಟ್ಟು, ಯಾವುದೇ ತನಿಖೆ ನಡೆಸದೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸರಿಯಲ್ಲ. ಘನವೆತ್ತ ರಾಜ್ಯಪಾಲರಿಗೆ ಈ ಹಿಂದೆ ಎಸ್ಐಟಿ ಮತ್ತು ಲೋಕಾಯುಕ್ತ ಸಂಸ್ಥೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮಂತ್ರಿಗಳಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಮನವಿ ಮಾಡಿದರೂ ಅದರ ಬಗ್ಗೆ ರಾಜ್ಯಪಾಲರು ಗಮನಹರಿಸಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ತಕ್ಷಣವೇ ಸ್ಪಂದಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಪಕ್ಷಪಾತ ಧೋರಣೆಯಾಗಿದೆ ಎಂದು ಆಪಾದಿಸಿದರು.
ರಾಜ್ಯಪಾಲರ ನ್ಯಾಯಸಮ್ಮತವಾಗಿ ಕೆಲಸ ಮಾಡಬೇಕೇ ಹೊರತು, ಯಾವುದೋ ಒಂದು ಪಕ್ಷದ ಪರವಾಗಿ ಕೆಲಸ ಮಾಡಬಾರದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮಂತ್ರಿಗಳ ವಿರುದ್ಧ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಬೇಕು. ಇವರ ವಿರುದ್ಧ ತನಿಖೆಯಾಗಿದೆ. ದಾಖಲೆಗಳು ಇವೆ. ಹಾಗಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.