ಶಾಲಾ ಅವಧಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಇಬ್ಬರು ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬುಗುಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್ ಮತ್ತು ರಾಜು ಎಂಬ ಇಬ್ಬರು ಶಿಕ್ಷಕರು ಶಾಲಾ ಸಮಯದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದರು, ಅಲ್ಲದೇ ಪರಸ್ಪರ ಹೊಡೆದಾಡಿದ್ದರು ಎಂಬ ಶಾಲಾಡಳಿತ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರ ಹೇಳಿಕೆ ಮೇರೆಗೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಇಲಾಖಾ ತನಿಖೆಯನ್ನು ಸಹ ಮಾಡಲಾಗಿದ್ದು ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದ್ದಾರೆ.
ಶಾಲೆಗೆ ಎರವಲಾಗಿ ಬೇರೊಬ್ಬ ಶಿಕ್ಷಕಿಯನ್ನು ನೇಮಿಸಲಾಗಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಮತ್ತೋರ್ವ ಶಿಕ್ಷಕರನ್ನೂ ಸಹ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.