ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದಲ್ಲಿ ಮಂಗಳವಾರ ವಾಂತಿ-ಭೇದಿಯಿಂದ 32 ಮಂದಿ ಅಸ್ವಸ್ಥರಾಗಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಂಧ್ರಪ್ರದೇಶದಲ್ಲಿ ಸೋಂಕಿಗೆ ತತ್ತರಿಸಿದ್ದು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದಲ್ಲಿ ಭೂತಪ್ಪ ಸ್ವಾಮಿ ಜಾತ್ರೆಯಲ್ಲಿ ಊಟ ಮಾಡಿದ ಮೂರು ಕುಟುಂಬದವರು ಏಕಾಏಕಿ ವಾಂತಿ ಭೇದಿಯಿಂದ ತತ್ತರಿಸಿದ್ದು, ಮೂವರು ಮೃತಪಟ್ಟಿದ್ದರು. 11 ಜನ ಅಸ್ವಸ್ಥರಾಗಿದ್ದರು.
ಸೋಮವಾರ ರಾತ್ರಿ ಮತ್ತೆ 21 ಜನರು ಅಸ್ವಸ್ಥರಾಗಿದ್ದು, ಒಟ್ಟು 32 ಜನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಡಿ ಭಾಗದ ಸೀಮಾಂಧ್ರದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ಸೀಮಾಂಧ್ರದಿಂದ ಭಕ್ತರು ಜಾತ್ರೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸೋಂಕು ಗ್ರಾಮಕ್ಕೂ ಹರಡಿದೆ ಎಂದು ಹೇಳಲಾಗಿದೆ.
ಮಂಗಳವಾರ ಸಹಕಾರ ಸಚಿವ ಕೆ.ಎನ್. ರಾಜಣ್ಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿ ಭಾಗದ ಆಂಧ್ರಪ್ರದೇಶದಿಂದ ಬಳುವಳಿಯಾಗಿ ಬಂದ ಸಾಂಕ್ರಾಮಿಕ ರೋಗದ ಸೋಂಕಿತರೊಬ್ಬರು ಮೃತಪಟ್ಟಿದ್ದು, ಗ್ರಾಮದ ವೃದ್ಧರಿಬ್ಬರು ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಜನರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಸರ್ಕಾರ ಸದಾಕಾಲ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಿಮ್ಮ ಜೊತೆಗಿರುತ್ತದೆ. ಆಂಧ್ರಪ್ರದೇಶದ ಕೆಲವು ಹಳ್ಳಿಗಳಲ್ಲಿ ವಾಂತಿ ಭೇದಿಯಿಂದ ಹೆಚ್ಚು ಹೆಚ್ಚು ಸಾವನ್ನಪ್ಪಿದ್ದು, ಈ ಊರಿನಿಂದ ಬಂದ ರೋಗಿಯೊಬ್ಬರು ಮರಣ ಹೊಂದಿದ್ದಾರೆ.