Monday, September 16, 2024
Google search engine
HomeUncategorizedವಾಂತಿ, ಭೇದಿ ಪ್ರಕರಣ-ಕಲುಷಿತ ನೀರು ಕಾರಣ ಅಲ್ಲ-ಡಿಸಿ

ವಾಂತಿ, ಭೇದಿ ಪ್ರಕರಣ-ಕಲುಷಿತ ನೀರು ಕಾರಣ ಅಲ್ಲ-ಡಿಸಿ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಬುಳ್ಳಸಂದ್ರ ಗ್ರಾಮದಲ್ಲಿ ವರದಿಯಾದ ವಾಂತಿ, ಭೇದಿ ಪ್ರಕರಣಗಳಿಗೆ ಕಲುಷಿತ ನೀರು ಕಾರಣವಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ.

ಮಧುಗಿರಿ ತಾಲೂಕು ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬುಳ್ಳಸಂದ್ರ ವಾಂತಿ-ಭೇದಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಸುಮಾರು 160 ಮನೆಗಳಿರುವ ಬುಳ್ಳಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಆಗಸ್ಟ್ 24ರ ಶನಿವಾರದಿಂದ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಕರಿಯಮ್ಮ, ಮುತ್ತರಾಯ, ಭೂತಪ್ಪ ಸ್ವಾಮಿಯ ಜಾತ್ರೆ ಸಂದರ್ಭದಲ್ಲಿ 85 ವರ್ಷದ ತಿಮ್ಮಕ್ಕ, 90 ವರ್ಷದ ಗಿರಿಯಮ್ಮ ಹಾಗೂ 45 ವರ್ಷದ ಕಾಟಮ್ಮ ಸೇರಿ ಮೂರು ಮಂದಿ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ.

ವೈದ್ಯರ ವರದಿ ಪ್ರಕಾರ ತಿಮ್ಮಕ್ಕ ಮತ್ತು ಗಿರಿಯಮ್ಮ ಅವರ ಸಾವು ವಯೋಸಹಜವಾಗಿದ್ದು, ಸಾವನ್ನಪ್ಪುವ ಮುನ್ನ ಇವರಿಬ್ಬರಲ್ಲೂ ವಾಂತಿ, ಭೇದಿ ಕಾಣಿಸಿಕೊಂಡಿರುವುದಿಲ್ಲ. ಕಾಟಮ್ಮ ಎಂಬ ಮಹಿಳೆ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕು ಸಿದ್ದಗಿರಿ ಗ್ರಾಮದಿಂದ ಜಾತ್ರೆಗಾಗಿ ತವರಿಗೆ ಬಂದಿದ್ದು, ಗ್ರಾಮಕ್ಕೆ ಬರುವ ಮುನ್ನವೇ ಈಕೆಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಕಾಟಮ್ಮ ಮೃತಪಟ್ಟಿದ್ದಾರೆ. ಕಲುಷಿತ ನೀರಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲವೆಂದು ಸ್ಪಷ್ಟಪಡಿಸಿದರು.

ಜಾತ್ರೆಯ ಸಂದರ್ಭದಲ್ಲಿ ಗ್ರಾಮದವರು ಬಳಸಿದ ನೀರನ್ನು ಪರೀಕ್ಷೆಗೊಳಪಡಿಸಲಾಗಿ ಕುಡಿಯಲು ಯೋಗ್ಯವಿರುವ ಬಗ್ಗೆ ವರದಿ ಬಂದಿದೆ. ಮೃತಪಟ್ಟ ದುರ್ದೈವಿ ತಾವೇ ತಯಾರಿಸಿದ ಟೊಮೊಟೋ ಬಾತ್, ಮಜ್ಜಿಗೆಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ. ಜಾತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದರಿಂದಲೇ ಇಂತಹ ಪ್ರಕರಣಗಳು ಘಟಿಸುತ್ತಿವೆ.

ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ವಾಂತಿ-ಭೇದಿಯಿಂದ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತಿದೇ ತಾಲ್ಲೂಕಿನಲ್ಲಿ ವಾಂತಿ-ಭೇದಿ ಪ್ರಕರಣ ವರದಿಯಾಗಿದೆ. ಸ್ವಚ್ಛತೆ ಇಲ್ಲದಿರುವುದು ಇಂಥ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬುಳ್ಳಸಂದ್ರ ಗ್ರಾಮದಲ್ಲಿ ಒಟ್ಟು 16 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಈ ಪೈಕಿ 9 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಹಾಗೂ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular