ಸುಪ್ರೀಂ ಕೋರ್ಟ್ ನ ಏಳು ನ್ಯಾಯಮೂರ್ತಿಗಳ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟರ ಒಳಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹಿಸಿ ಸೆಪ್ಟಂಬರ್ 9ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ 2023ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಮತ್ತು 2024ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಶಿಫಾರಸ್ಸು ಕಳುಹಿಸಿದ್ದರು. ಆದರೆ ಈಗ ಸುಪ್ರಿಂಕೋರ್ಟು ಆದೇಶ ಬಂದ ತಿಂಗಳು ಕಳೆಯುತ್ತಿದ್ದರೂ ಮೀನಾಮೇಷ ಎಣಿಸುತ್ತಿದೆ. ಸರ್ಕಾರವನ್ನು ಈ ನಿಟ್ಟಿನಲ್ಲಿ ಮತ್ತೊಮ್ಮೆ ಎಚ್ಚರಗೊಳಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 9ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು ಮನವಿ ಸಲ್ಲಿಸಲಾಗುವುದು. ಬೆಂಗಳೂರಿನ ಪ್ರೀಡಂ ಪಾರ್ಕಿನಿಂದ ಮುಖ್ಯಮಂತ್ರಿಗಳ ನಿವಾಸದವರೆಗೂ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.
ಚುನಾವಣಾ ಪ್ರಾಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಲಿ, ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಯಾವೊಬ್ಬ ದಲಿತ ಶಾಸಕರು ಒಳಮೀಸಲಾತಿ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಇದು ಇವರ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ. ಕೂಡಲೇ ಮೀಸಲಾತಿಯಿಂದ ಆಯ್ಕೆಯಾಗಿರುವ ಎಲ್ಲಾ ಶಾಸಕರು ಶಾಸಕರಾಗಿ ಮುಂದುವರೆಯುವ ನೈತಿಕತೆ ಹೊಂದಿಲ್ಲ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಸಂಸ ಒತ್ತಾಯಿಸುತ್ತಿದೆ. ಅಂಬೇಡ್ಕರ್ ಹೇಳಿದಂತೆ ಇವರು ಬಾಯಿಕಟ್ಟಿದ, ಬೆಲ್ಟ್ ಹಾಕಿದ ನಾಯಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲ ಸಂವಿಧಾನದ ಅನುಚ್ಛೇದ 15(4) ಮತ್ತು 16(4) ರಂತೆ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡಮಾಡಿದ ಮೀಸಲಾತಿಯು ಮೂಲಭೂತ ಹಕ್ಕಾಗಿದ್ದು, ಕೆನೆ ಪದರಕ್ಕೆ ಅವಕಾಶವೇ ಇಲ್ಲ. ಸಂವಿಧಾನದ ವಿಧಿ 15(4) ಮತ್ತು 16 (4) ಸಮಕಾಲೀಕ ಪಟ್ಟಿ ಅಡಿಯಲ್ಲಿ ಬರುತ್ತದೆ. ಹಾಗಾಗಿ ಕೇಂದ್ರ ಅಳವಡಿಸಿಕೊಂಡ ನೀತಿಗಳನ್ನೇ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ.
ಹೀಗಾಗಿ ಈಗಾಗಲೇ ಸುಪ್ರೀಂಕೋರ್ಟಿನ ಆದೇಶವನ್ನು ಸ್ವಾಗತಿಸಿದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳಿಗೆ ಕೆನೆ ಪದರ ಮೀಸಲಾತಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಮೀನಾಮೇಷ ಎಣಿಸದೆ ಯಾವುದೇ ವಿಳಂಬ ನೀತಿ ಅನುಸರಿಸದೇ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ದ.ಸಂ.ಸ. ಆಗ್ರಹಿಸುತ್ತದೆ ಎಂದು ಎನ್.ಮೂರ್ತಿ ತಿಳಿಸಿದರು.
ರಾಜ್ಯ ಸರ್ಕಾರ ತನ್ನ 2023-24 ಮತ್ತು 2024-25 ನೇ ಸಾಲಿನ ಬಜೆಟ್‌ನಲ್ಲಿ 25391 ಕೋಟಿ ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗದ ಅಭಿವೃದ್ಧಿಯ ಹಣ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬರುತ್ತದೆ. ಬಲಗೈನಲ್ಲಿ ಕೊಟ್ಟು, ಎಡಗೈನಲ್ಲಿ ಕಿತ್ತುಕೊಂಡಿದೆ. ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದೇವೆ ಎಂದು ಹೇಳುವ ಹಣವನ್ನು ಕೂಡಲೇ ಎಸ್ಸಿಪಿ, ಟಿಎಸ್ಪಿ ನಿಧಿಗೆ ವಾಪಸ್ಸ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸುತ್ತದೆ. ಹಾಗೆಯೆ ಸ್ಥಗಿತಗೊಳಿಸಿರುವ ವಿದ್ಯಾರ್ಥಿ ವೇತನವನ್ನು ಮರು ಜಾರಿ ಮಾಡಿ, ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಒಳಮೀಸಲಾತಿ ಜಾರಿಯಾಗುವವರೆಗೆ ಎಲ್ಲಾ ನೇಮಕಾತಿಗಳನ್ನು ಮುಂದೂಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿ.ಎಸ್.ಎಸ್.ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ರಾಜ್ಯ ಸಮಿತಿ ತೀರ್ಮಾನದಂತೆ ಸೆಪ್ಟಂಬರ್ 9 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಎ.ರಂಜನ್, ಹಟ್ಟಪ್ಪ, ಪರಮೇಶ್, ಚಿ.ರಾಜು ಮತ್ತಿತರರು ಹಾಜರಿದ್ದರು.