ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಬುಗುಡನಹಳ್ಳಿಯಲ್ಲಿ ಶಾಲಾ ಮಕ್ಕಳ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಪರಸ್ಪರ ಹೊಡೆದಾಡಿ ಶಾಲಾ ಶಿಕ್ಷಕರ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಇಬ್ಬರು ಶಿಕ್ಷಕರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತುರುವೇಕೆರೆ ತಾಲೂಕಿನ ಬುಗುಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 9 ಮಕ್ಕಳು ಮಾತ್ರ ಇದ್ದು ಈ ಮಕ್ಕಳಿಗೆ ಬೋಧನೆ ಮಾಡಲು ಇಬ್ಬರು ಶಿಕ್ಷಕರು ಇದ್ದಾರೆ. ಶಿಕ್ಷಕರಾದ ಮಲ್ಲಿಕಾರ್ಜುನ್ ಮತ್ತು ರಾಜು ಆಗಾಗ್ಗೆ ಮಕ್ಕಳ ಎದುರೇ ಜಗಳವಾಡುತ್ತಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು ಮತ್ತು ಶಾಲಾ ಆಡಳಿತ ಮಂಡಲಿ ಸದಸ್ಯರು ಇಬ್ಬರು ಶಿಕ್ಷಕರಿಗೂ ಬುದ್ದಿವಾದ ಹೇಳಿ, ಇಬ್ಬರಿಂದಲೂ ಕ್ಷಮಾಪಣಾ ಪತ್ರವನ್ನೂ ಸಹ ಬರೆಸಿಕೊಂಡಿದ್ದಾರೆ. ಆದರೂ ಸಹ ಇಬ್ಬರು ಶಿಕ್ಷಕರು ತಮ್ಮ ಎಂದಿನ ಸಣ್ಣತನವನ್ನು ಬಿಟ್ಟಿರಲಿಲ್ಲ ಎಂದು ಹೇಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಇಬ್ಬರು ಶಿಕ್ಷಕರು ಕ್ಷುಲ್ಲಕ ವಿಚಾರಕ್ಕೆ ಬಾಯಿಗೆ ಬಂದಂತೆ ಕಿರಿಚಾಡಿ, ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡಿದ್ದು ಪರಸ್ಪರ ಕೊರಳಪಟ್ಟಿ ಹಿಡಿದು ಹೊಡೆದಾಡಿದ್ದಾರೆ. ಇದನ್ನು ಗಮನಿಸಿದ ಮಕ್ಕಳು ಕಿರುಚಿಕೊಂಡಿದ್ದಾರೆ. ಇದನ್ನು ಕೇಳಿದ ಗ್ರಾಮಸ್ಥರು ಕೂಡಲೇ ಇಬ್ಬರು ಶಿಕ್ಷಕರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿದ ನಂತರ ಪರಿಸ್ಥಿತಿ ತಿಳಿಗೊಳಿಸಿದರು ಎಂದು ಹೇಳಲಾಗಿದೆ.
ಶಿಕ್ಷಕರ ವರ್ತನೆಯನ್ನು ಕಂಡು ಬೇಸರಗೊಂಡ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಿವರಾಜ್, ಸದಸ್ಯರಾದ ಮಂಜುನಾಥ್, ನಾಗರಾಜ್ ಮೊದಲಾದವರು ಶನಿವಾರ ಬೆಳಗ್ಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು. ಶಾಲೆಯ ಶಿಕ್ಷಕರಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕರೇ ದಾರಿ ತಪ್ಪಿ ಮಕ್ಕಳೆದುರು ಹೊಡೆದಾಡಿಕೊಂಡಿರುವುದು ಖಂಡನೀಯ. ಇವರಿಗೆ ಸಾಕಷ್ಟು ಬಾರಿ ಬುದ್ದಿ ಹೇಳಿದರೂ ಸಹ ತಿದ್ದುಕೊಳ್ಳದೆ ಇರುವುದು ಸರಿಯಲ್ಲ. ಹಾಗಾಗಿ ಇಬ್ಬರು ಶಿಕ್ಷಕರನ್ನೂ ಕೂಡಲೇ ಅಮಾನತು ಮಾಡಬೇಕು ಹಾಗೂ ಈ ಶಾಲೆಗೆ ಉತ್ತಮ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಬುಗುಡನಹಳ್ಳಿಯ ಶಾಲಾ ಶಿಕ್ಷಕರಿಬ್ಬರು ಹೊಡೆದಾಡಿಕೊಂಡಿರುವ ಪ್ರಕರಣ ಸಂಬಂಧ ನಾಗರೀಕ ಸೇವಾ ನಿಯಮದಡಿ ಇಬ್ಬರಿಗೂ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೇ ಈ ಶಿಕ್ಷಕರ ಬೇಜವಾಬ್ದಾರಿ ವರ್ತನೆಯ ವಿರುದ್ಧ ಸಾಕಷ್ಟು ದೂರುಗಳು ಇದ್ದರೂ ಸಹ ಬೇಜವಾಬ್ದಾರಿತನ ತೋರಿರುವ ಸಿಆರ್‌ಪಿ, ಬಿಆರ್‌ಸಿ, ಇಸಿಓ ಗಳ ವಿರುದ್ಧವೂ ಸಹ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಸಿದ್ದಲಿಂಗೇಗೌಡ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.