ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿ ಬಿಕ್ಕೆಗುಡ್ಡ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಏತನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಗುರುವಾರ ರೈತ ಮುಖಂಡರು ಹಾಗೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ಹೇಮಾವತಿ ನಾಲಾ ವಲಯ ಮುಖ್ಯ ಇಂಜಿನಿಯರ್ ಫಣಿರಾಜು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, 2015ರಲ್ಲಿ ರೈತ ಸಂಘ ಹಾಗೂ ರೈತರ ಹೋರಾಟದ ಫಲವಾಗಿ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಏತ ನೀರಾವರಿ ಯೋಜನೆಗಳು ಆರಂಭಗೊಂಡರೂ ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಕೆಲಸಗಳಾಗಿವೆ. ಆದರೆ ಪೂರ್ಣ ಪ್ರಮಾಣದ ಕಾಮಗಾರಿ ಮುಗಿಯದೆ ನೀರು ಹರಿಸಲು ಸಾಧ್ಯವಾಗಿಲ್ಲ. ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಈಗಾಗಲೇ ಯೋಜನೆಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರವೂ ಇಲ್ಲ ಎಂದರು.
ಇತ್ತ ಬಿಕ್ಕೆಗುಡ್ಡ ಯೋಜನೆಯಲ್ಲಿ ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಬಂದಿಲ್ಲವೆಂಬ ಕಾರಣಕ್ಕೆ ಮುಖ್ಯ ನಾಲೆಯ 4 ಕಿ.ಮಿ. ಮತ್ತು ವಿತರಣಾ ನಾಲೆಯ 4 ಕಿ.ಮಿ.ಕಾಮಗಾರಿಗೆ ಅಗತ್ಯವಿರುವ ಪೈಪ್‌ಲೈನ್ ಕಾಮಗಾರಿ ನಿಂತಿದೆ. ಗುತ್ತಿಗೆದಾರರಿಗೆ 2 ಕೋಟಿ ಬಾಕಿ ಬರಬೇಕಿದೆ. ಹಾಗೆಯೇ ರೈತರಿಗೂ 2 ಕೋಟಿ ರೂ ಭೂ ಪರಿಹಾರ ಬಾಕಿ ಇದೆ. ಮುಖ್ಯ ಇಂಜಿನಿಯರ್ ಅವರು ತ್ವರಿತವಾಗಿ ಕಾಮಗಾರಿ ನಡೆಸಲು ಬಾಕಿ ಹಣ ಪಾವತಿಗೆ ಅಗತ್ಯ ಕ್ರಮ ಕೈಗೊಂಡರೆ, ಈ ಬಾರಿಯಾದರೂ ನೀರು ಹರಿಸಬಹುದು ಎಂದು ಒತ್ತಾಯಿಸಿದರು.
ಹಾಗಲವಾಡಿ ಯೋಜನೆ ಸಹ 3 ಹಂತದ ಕಾಮಗಾರಿಗಳು ನಡೆದಿದ್ದು, ಭೂಸ್ವಾಧೀನದ ವಿಳಂಬದಿಂದ ಅಲ್ಲಲ್ಲಿ ಕಾಮಗಾರಿ ನಿಂತಿದೆ. ಹಾಗಾಗಿ ಭೂ ಸ್ವಾಧೀನಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ರೈತರು ಕಳೆದ 9 ವರ್ಷಗಳಿಂದ ನಮಗೆ ಕುಡಿಯಲು ನೀರು ಬರುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತಿದ್ದಾರೆ. ಅವರ ತಾಳ್ಮೆ ಪರೀಕ್ಷಿಸುವುದು ಬೇಡ ಎಂದರು.
ರೈತ ಮುಖಂಡರ ಮನವಿಗೆ ಉತ್ತರಿಸಿದ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಫಣಿರಾಜು, ಬಿಕ್ಕೆಗುಡ್ಡ ಏತನೀರಾವರಿಗೆ ಸಂಬಂಧಿಸಿಂತೆ 2024ರ ಸೆಪ್ಟಂಬರ್ 15ರೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಸೆಪ್ಟಂಬರ್ 4ರಂದು ಆ ಭಾಗದ ರೈತರೊಂದಿಗೆ ಅದಾಲತ್ ನಡೆಸಿ, ಭೂಸ್ವಾಧೀನ ಮತ್ತು ಪರಿಹಾರ ಪೂರ್ಣಗೊಳಿಸಿ, ತಕ್ಷಣವೇ ಕೆಲಸ ಆರಂಭಿಸಿ, ಆಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್ 15 ರಂದು ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಹೇಮಾವತಿ ನಾಲಾವಲಯದ ಅಧೀಕ್ಷಕ ಇಂಜಿನಿಯರ್, ವಿಶೇಷ ಭೂಸ್ವಾಧೀನಾಧಿಕಾರಿಗಳು, ಹಾಗಲವಾಡಿ ಮತ್ತು ಬಿಕ್ಕೆಗುಡ್ಡ ಯೋಜನೆಗಳ ಎಇಇಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ, ಮುಖಂಡರಾದ ಮುನಿಯಪ್ಪ, ತಮ್ಮಯಣ್ಣ, ಸದಾಶಿವಪ್ಪ, ಕೃಷ್ಣಜೆಟ್ಟಿ ಹಾಗಲವಾಡಿ, ಗುಬ್ಬಿ ರವೀಶ್, ಯತೀಶ್, ಸುರೇಶ್, ಭದ್ರಯ್ಯ, ಜಗದೀಶ್ ಮತ್ತಿತರರು ಹಾಜರಿದ್ದರು.