ಕ್ಯಾನ್ಸರ್ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಈ ರೋಗ ಬಂದ್ರೆ ಸತ್ತೇ ಹೋಗ್ತೀವಿ ಅನ್ನೋ ಮನೋಭಾವನೆ ಬಂದು ಬಿಡುತ್ತೆ. ಆದ್ರೆ ಕ್ಯಾನ್ಸರ್ ಬಗ್ಗೆ ಭಯ ಬೇಡ, ಮುಂಜಾಗ್ರತೆ ವಹಿಸಿ ಚಿಕಿತೆ ಪಡೆಯಿರಿ ಎಂದು ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಮಹಿಳೆಯರಿಗೆ ಅರಿವು ಮೂಡಿದರು.
ನಗರದ ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ, ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ ನಾಗವಲ್ಲಿಯ ರಂಗನಾಥಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್ಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಆರೋಗ್ಯ ಜಾಗೃತಿ ಆಂದೋಲನದಲ್ಲಿ ಶಾಲೆಯ ಮಕ್ಕಳಿಗೆ ಆರೋಗ್ಯ ತಪಾಸಣೆ ಜೊತೆಗೆ ಸ್ವಚ್ಛತೆ ಬಗ್ಗೆ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ನಾಟಕ ಮಾಡಿ ವಿವರಿಸಿದರು. ನೈಸರ್ಗಿಕ ಮತ್ತು ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಂಗನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಉತ್ತಮ ಅಭ್ಯಾಸ, ಹವ್ಯಾಸ ಮತ್ತು ಜೀವನ ಶೈಲಿಯಿಂದ ಹಲವಾರು ಕಾಯಿಲೆಗಳಿಂದ ನಾವು ದೂರವಿರಬಹುದು. ಕೆಟ್ಟ ಚಟಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಅವುಗಳಿಂದ ದೂರವಿಡಿ ಎಂದು ಸಲಹೆ ನೀಡಿದರು.
ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಎನ್. ಅರುಣಾ ಮಾತನಾಡಿ, ಇತ್ತೀಚಿನ ನಮ್ಮ ಒತ್ತಡದ ಜೀವನ, ಆಹಾರ ಶೈಲಿ, ನಾವು ರೂಢಿಸಿಕೊಂಡಿರುವ ಹಲವಾರು ಅಭ್ಯಾಸ ಹವ್ಯಾಸಗಳು, ಇಂದಿನ ಯುವ ಜನಾಂಗದವರು ಕೂಡ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನಮ್ಮ ಆಯುಷ್ಯ ಕಡಿಮೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂದರು.