ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್ ಮಂಡಿಸುವ ಮೂಲಕ ಹಣಕಾಸು ಸಚಿವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ತಾಜುದ್ದೀನ್ ಷರೀಫ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಒದಗಿಸಿದ್ದು, ಇತರ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ದೂರಿದ್ದಾರೆ.
ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ, ಪೊಳ್ಳು ಭರವಸೆಗಳನ್ನು ಹಣಕಾಸು ಸಚಿವರು ಮುಂದುವರೆ ಸಿದ್ದಾರೆ. ಕರ್ನಾಟಕದಿಂದ ಎನ್‌ಡಿಎ ಪಕ್ಷದ 19 ಮಂದಿಯನ್ನು ರಾಜ್ಯದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದರೂ ರಾಜ್ಯಕ್ಕೆ ಒಂದೇ ಒಂದು ಯೋಜನೆ ನೀಡದೆ, ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಜೆಟ್ ಜನಪರ ಮತ್ತು ರೈತ ಪರವಾಗಿರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಯಾವ ವರ್ಗಕ್ಕೂ ನಯಾಪೈಸೆ ಲಾಭವಿಲ್ಲ. ಮಧ್ಯಮ ವರ್ಗದ ಜನರು ಮತ್ತು ಬಡವರಿಗೂ ಅನುಕೂಲವಾಗಿಲ್ಲ ಎಂದಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿ ಕುರಿತಾಗಿ ಪ್ರಸ್ತಾಪಿಸಿಯೇ ಇಲ್ಲ. ಸರ್ಕಾರಿ ಉದ್ಯೋಗದ ಬಗ್ಗೆಯೂ ಯಾವುದೇ ಮಾರ್ಗಸೂಚಿ ಇಲ್ಲ. ಇದೊಂದು ಅತ್ಯಂತ ನಿರಾಶಾದಾಯಕ ಬಜೆಟ್. ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.
ಬಜೆಟ್‌ನಲ್ಲಿ ಯುವಕರಿಗೆ, ಮಧ್ಯಮ ವರ್ಗ ಹಾಗೂ ಬಡ ವರ್ಗದವರಿಗೆ ಏನನ್ನು ನೀಡಿಲ್ಲ. ಇದೊಂದು ಬಡವರ, ದೀನ ದಲಿತರ ಹಾಗೂ ಮಧ್ಯಮ ವರ್ಗದವರ ವಿರೋಧಿ ಬಜೆಟ್ ಆಗಿದೆ ಎಂದು ಆಪಾದಿಸಿದ್ದಾರೆ.