Friday, November 22, 2024
Google search engine
Homeಮುಖಪುಟಸಿಎಂ ಹುದ್ದೆಗೂ ರೇಟ್ ಫಿಕ್ಸ್ ಮಾಡಿದ್ದು ಬಿಜೆಪಿ - ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆರೋಪ

ಸಿಎಂ ಹುದ್ದೆಗೂ ರೇಟ್ ಫಿಕ್ಸ್ ಮಾಡಿದ್ದು ಬಿಜೆಪಿ – ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆರೋಪ

ವರ್ಗಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿ, ಅದಕ್ಕೆ ಪರ್ಸೆಂಟೇಜ್ ಮತ್ತು ರೇಟ್ ಗಳನ್ನು ನಿಗದಿ ಮಾಡಿದ್ದು ಬಿಜೆಪಿಯವರು, ಅವರು ಸಿಎಂ, ಡಿಸಿಎಂ ಹುದ್ದೆಗೂ ರೇಟ್ ಫಿಕ್ಸ್ ಮಾಡಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಆರೋಪಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆ ಶುರು ಮಾಡಿದೆ. ಅದಕ್ಕೆ ಪರ್ಸೆಂಟೇಜ್, ರೇಟ್ ಫಿಕ್ಸ್ ಮಾಡಿದೆ ಎಂದು ಆರೋಪಿಸಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒಗಳ ವರ್ಗಾವಣೆ, ಕಂದಾಯ ಇಲಾಖೆಯಲ್ಲಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ, ಆರೋಗ್ಯ ಇಲಾಖೆಯಲ್ಲಿ ವೈದ್ಯರ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಕೌನ್ಸೆಲಿಂಗ್ ಜಾರಿಗೆ ತಂದಿದೆ. ಆದರೆ, ಬಿಜೆಪಿಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ಪಡೆಯಲು ಎಷ್ಟು ಸಾವಿರ ಕೋಟಿ ನೀಡಬೇಕು ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಯಲು ಮಾಡಿದ್ದರು ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ನೇಮಕದಲ್ಲಿ, ವರ್ಗಾವಣೆಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡುತ್ತಿಲ್ಲ. ಅಧಿಕಾರಿಗಳನ್ನು ಅವರಷ್ಟಕ್ಕೇ ಕಾರ್ಯ ನಿರ್ವಹಿಸಲು ಬಿಡುತ್ತಿದೆ. ಗೃಹ ಇಲಾಖೆಯಲ್ಲಿ ಅಧಿಕಾರಿಗಳು ಒಮ್ಮೆ ವರ್ಗಾವಣೆಯಾದ ನಂತರ ಅವರು ಎರಡು ವರ್ಷ ಆ ಹುದ್ದೆಯಲ್ಲಿರಬೇಕು ಎಂದು ಕಾನೂನು ತಿದ್ದುಪಡಿ ತರಲು ಮುಂದಾಗಿದೆ. ಸಿ.ಟಿ.ರವಿ ಅವರು ಆಧಾರವಿಲ್ಲದ ಹೇಳಿಕೆಗಳನ್ನು ಕೊಡಬಾರದು ಎಂದು ತಿರುಗೇಟು ನೀಡಿದರು.

ವಾಲ್ಮೀಕಿ ನಿಗಮದ ಹಗರಣದ ವಿಚಾರ ಎರಡೂ ಸದನಗಳಲ್ಲಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳು ಅದರ ಬಗ್ಗೆ ಎಳೆ, ಎಳೆಯಾಗಿ ವಿವರ ನೀಡಲು ಬಯಸಿದ್ದಾರೆ. ಆದರೆ, ಬಿಜೆಪಿಯವರಿಗೆ ಕೇಳುವ ತಾಳ್ಮೆ ಇಲ್ಲ. ಅವರ ಮಾತಿಗೆ ಅಡ್ಡಿ ಪಡಿಸುತ್ತಿದ್ದಾರೆ. ನಿಗಮಗಳ ಹಗರಣ ಶುರುವಾಗಿದ್ದು ಬ್ಯಾಂಕ್ ಗಳಿಂದ. ಬ್ಯಾಂಕ್ ಅಧಿಕಾರಿಗಳು ಇಷ್ಟೊಂದು ಹಣವನ್ನು ಅನ್ಯ ಖಾತೆಗೆ ವರ್ಗಾವಣೆ ಮಾಡಿದರು. ಬ್ಯಾಂಕ್ ಗಳು ನೇರವಾಗಿ ವಿತ್ತ ಇಲಾಖೆಯ ಅಡಿ ಬರುತ್ತವೆ. ಹಾಗಿದ್ದರೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆ ಕೇಳಲಿಕ್ಕೆ ಆಗುತ್ತಾ..? ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯಿಂದ ಬಂದ ಹೆಸರಿಗೆ ಮಸಿ ಬಳಿಯಬೇಕು.‌ ಕಪ್ಪು ಚುಕ್ಕೆ ಬಳಿಯಬೇಕು ಎಂದು ಬಿಜೆಪಿಯವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ‌ ದೂರಿದರು. ಶಾಸಕರಾದ ದಿನೇಶ್ ಗೂಳಿಗೌಡ. ಅನಿಲ್ ಕುಮಾರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular