ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವಂತೆ ಆಶೀರ್ವದಿಸಿ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಸಿದ್ದಗಂಗಾ ಮಠದ ಮಠಾಧೀಶ ಸಿದ್ದಲಿಂಗ ಸ್ವಾಮಿಗಳಿಗೆ ಸಚಿವ ಸೋಮಣ್ಣ ಸಮ್ಮುಖದಲ್ಲೇ ಮನವಿ ಮಾಡಿದ ಪ್ರಸಂಗ ನಡೆಯಿತು.
ತಮ್ಮ ಹುಟ್ಟು ಹಬ್ಬದ ಅಂಗವಾಗಿ ವಿ.ಸೋಮಣ್ಣ ದಂಪತಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿದ ಬಳಿಕ ಮಠಾಧೀಶ ಸಿದ್ದಲಿಂಗ ಸ್ವಾಮಿಗಳಿಂದ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ಬಿ.ಸುರೇಶ್ ಗೌಡ ಅವರು ಸ್ವಾಮೀಜಿಗೆ ಈ ಮನವಿಯನ್ನು ಮಾಡಿದರು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸೋಮಣ್ಣ ಅವರಿಗೆ ಒಂದು ಆಸೆ ಇದೆ. ಅದು ಕಾಂಗ್ರೆಸ್ ನಲ್ಲಿದ್ದಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಬಿಜೆಪಿಗೆ ಬಂದಿದ್ದಾರೆ. ಹಾಗಾಗಿ ಸೋಮಣ್ಣನವರಿಗೆ ಅವರಿಗೆ ಮುಖ್ಯಮಂತ್ರಿಯಾಗುವಂತೆ ಆಶೀರ್ವದಿಸಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳಲ್ಲಿ ಶಾಸಕ ಸುರೇಶ್ ಗೌಡ ನಿವೇದಿಸಿಕೊಂಡರು.
ಈ ಸಂದರ್ಭದಲ್ಲಿ ಸುರೇಶ್ ಗೌಡರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದಲಿಂಗ ಸ್ವಾಮೀಜಿ ಸಿಎಂ ವಿಚಾರ ಪ್ರಸ್ತಾಪಕ್ಕೆ ಹಣೆ ಬರಹದಲ್ಲಿ ಬರೆದಿದ್ದರೆ ಆಗುತ್ತಾರೆ ಎಂದು ಹೇಳಿದರು.
ಹೀಗಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಪಶ್ಚಾತಾಪ ಕಾಡುತ್ತಿದೆಯಾ? ಕಾಂಗ್ರೆಸ್ ನಲ್ಲಿದ್ದಿದ್ದರೆ ಸಿಎಂ ಆಗುವ ಯೋಗ ಇತ್ತಾ? ಬಿಜೆಪಿಗೆ ಬಂದು ಸಿಎಂ ಸ್ಥಾನ ತಪ್ಪಿದೆಯಾ ಎಂಬ ವಿಷಯ ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ.