Friday, November 22, 2024
Google search engine
Homeಜಿಲ್ಲೆಹೇಮಾವತಿ ಲಿಂಕ್ ಕಾಲುವೆ ವಿರೋಧಿಸಿ ಶಾಸಕರು ಹೋರಾಡಿ

ಹೇಮಾವತಿ ಲಿಂಕ್ ಕಾಲುವೆ ವಿರೋಧಿಸಿ ಶಾಸಕರು ಹೋರಾಡಿ

ಹೇಮಾವತಿ ಲಿಂಕ್ ಕೆನಾಲ್‌ನಿಂದ ಜಿಲ್ಲೆಯ ಹೇಮಾವತಿ ನೀರಿಗೆ ಕುತ್ತು ಬರಲಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ವಿಧಾನಸಭೆಯಲ್ಲಿ ಲಿಂಕ್ ಕಾಲುವೆ ವಿರುದ್ದ ದ್ವನಿ ಎತ್ತುವಂತೆ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.

ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜಾತಿ, ಪಕ್ಷದ ಲಾಭಿಗೆ ಮಣಿದು ಇಂತಹ ಘನ ಘೋರ ಅನ್ಯಾಯ ತಡೆಯಲು ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ನೀವು ವಿಷ ಕೊಟ್ಟಂತೆ ಆಗುತ್ತದೆ. ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ದ ಜಿಲ್ಲೆಯ ಎಲ್ಲಾ ಶಾಸಕರು ಸದನದ ಒಳಗೆ ಮತ್ತು ಹೊರಗೆ ದ್ವನಿ ಎತ್ತಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ, ರೈತರಿಗೆ ಮಾರಕ ವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಸೇರಿದಂತೆ ಕೊಟ್ಟ ಮಾತಿಗೆ ತಪ್ಪಿದೆ. ಅಲ್ಲದೆ ಸರ್ಕಾರದ ನೀತಿಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮತ್ತು ಬಗರ್ ಹುಕುಂ ಸಾಗುವಳಿದಾರರ ನಡುವಿನ ಸಂಘರ್ಷ ಹೆಚ್ಚಾಗಿದೆ. ಹತ್ತಾರು ವರ್ಷಗಳಿಂದಲೂ ಭೂಮಿ ಉಳುಮೆ ಮಾಡುತ್ತಾ ಬಂದಿದ್ದರೂ ಒಂದಿಲೊಂದು ಕಾರಣ ನೀಡಿ, ಸಾಗುವಳಿ ಚೀಟಿ ನೀಡುತ್ತಿಲ್ಲ. ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರಗೂ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ರೈತರ ಆತ್ಮಹತ್ಯೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯಲು ಸರ್ಕಾರ ಕೃಷಿ ಬೆಲೆ ನಿಗದಿ ಆಯೋಗದ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ ಮಾತನಾಡಿ, ಪಹಣಿ, ದುರಸ್ತಿ, ಪಕ್ಕಾಪೋಡು, ಹದ್ದುಬಸ್ತು, ನೊಂದಣಿ ಶುಲ್ಕ ಎಲ್ಲವೂ ದುಬಾರಿಯಾಗಿದ್ದು, ಕೂಡಲೇ ವಾಪಸ್ ಪಡೆಯಬೇಕು. ಕಳೆದ 9 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಹಾಲಿನ ಪ್ರೋತ್ಸಾಹ ಅತಿ ಅವಶ್ಯಕವಾಗಿ ಬೇಕಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ವೆಂಕಟೇಗೌಡ, ಲಕ್ಷ್ಮಣಗೌಡ, ಡಿ.ಆರ್.ರಾಜಶೇಖರ್, ಕೆಂಚಪ್ಪ, ಸಿ.ಜಿ.ಲೋಕೇಶ್, ರಂಗಹನುಮಯ್ಯ, ತಿಮ್ಮೇಗೌಡ, ರವೀಶ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular