ಹೇಮಾವತಿ ನಾಲೆಯಿಂದ ಮಾಗಡಿ ಮತ್ತು ರಾಮನಗರ ತಾಲೂಕುಗಳಿಗೆ ನೀರು ತೆಗೆದುಕೊಂಡು ಹೋಗುವ ಲಿಂಕ್ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಕಳೆದ ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದರು, ಸರ್ಕಾರ ಯೋಜನೆಯನ್ನು ರದ್ದುಪಡಿಸದ ಹಿನ್ನೆಲೆಯಲ್ಲಿ ಯೋಜನೆ ರದ್ದು ಮಾಡುವಂತೆ ಒತ್ತಾಯಿಸಿ ಜೂನ್ 25ರಂದು ತುಮಕೂರು ಜಿಲ್ಲಾ ಬಂದ್ ನಡೆಸಲಾಗುವುದು ಎಂದು ಹೇಮಾವತಿ ನೀರಾವರಿ ಹೋರಾಟ ಸಮಿತಿಯ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ಹೇಮಾವತಿ ನೀರನ್ನು ಹಾಲಿ ಇರುವ ನಾಲೆಯ ಮೂಲಕ ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ ಎಕ್ಸ್‌ಪ್ರೆಸ್ ಕೆನಾಲ್ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ. ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ 72-241 ಆಧುನೀಕರಣ ಕಾಮಗಾರಿ ಚಾಲ್ತಿಯಲ್ಲಿದೆ. ಹೀಗಿದ್ದು ಪೈಪ್ ಲೈನ್ ಯೋಜನೆಯ ಅಗತ್ಯವಾದರು ಎನು ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ದಿಲೀಪಕುಮಾರ್ ಮಾತನಾಡಿ, ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗೆ ಸಾಕಷ್ಟು ವಿರೋಧವಿದ್ದರು ಸಹ ಸರ್ಕಾರ ಪೈಪ್ ಲೈನ್ ಹಾದು ಹೋಗುವ ಸರ್ಕಾರಿ ಜಾಗಗಳಾದ ರಸ್ತೆ, ಕರೆ ಏರಿ, ಗೋಮಾಳಗಳಲ್ಲಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್, ಮರ, ಗಿಡಗಳನ್ನು ತೆರವುಗೊಳಿಸುವಂತೆ ನಿಟ್ಟೂರು ಬೆಸ್ಕಾಂ ಪತ್ರ ಬರೆದಿದೆ. ಸರ್ಕಾರ ತುಮಕೂರು ಜಿಲ್ಲೆಯ ಜನರ ಹೋರಾಟವನ್ನು ನಿರ್ಲಕ್ಷಿಸಿದೆ. ಸ್ಥಳೀಯ ಸರ್ಕಾರಗಳಾದ ಗ್ರಾ.ಪಂಗಳಿಂದಲೂ ಕಾಮಗಾರಿಗೆ ಎನ್.ಓ.ಸಿ ಪಡೆದಿಲ್ಲ. ವಿದ್ಯುತ್ ಕಂಬಗಳನ್ನು ರೈತರ ಹಿಡುವಳಿ ಭೂಮಿಗೆ ಸ್ಥಳಾಂತರಿಸಲು ಮುಂದಾಗಿದೆ. ಯಾವ ಕಾರಣಕ್ಕು ಟಿ.ಸಿ, ವಿದ್ಯುತ್ ಕಂಬ ಸ್ಥಳಾಂತರಕ್ಕೆ, ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ. ಎಂತಹ ಹೋರಾಟಕ್ಕು ಸಹ ನಾವು ಸಿದ್ದರಿದ್ದೇವೆ ಎಂದರು.
ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಒಮ್ಮೆ ಈ ಯೋಜನೆ ಜಾರಿಗೆ ಬಂದರೆ ಹೇಮಾವತಿ ನೀರನ್ನೇ ನಂಬಿ ರೂಪಿಸಿರುವ 23 ಉಪ ನಾಲೆ, 28 ಕ್ಕು ಹೆಚ್ಚು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೆನೆಗುದಿಗೆ ಬೀಳಲಿವೆ. ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಮೂಲಕ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರ ನಡುವೆ ಅಂತರ ಜಿಲ್ಲಾ ನದಿ ನೀರಿನ ವ್ಯಾಜ್ಯ ತಂದಡಲಿದೆ. ಇಬ್ಬರು ಪ್ರತಿವರ್ಷ ಹೇಮಾವತಿ ನೀರಿಗಾಗಿ ಕಾದಾಡಬೇಕಾಗುತ್ತದೆ. ಹಾಗಾಗಿ ಸರ್ಕಾರವೇ ಮುಂದೆ ನಿಂತು ಎರಡು ಜಿಲ್ಲೆಯ ಜನರಿರೊಂದಿಗೆ ಯೋಜನೆಯ ಸಾಧಕ, ಭಾದಕಗಳ ಕುರಿತು ಚರ್ಚೆ ನಡೆಸಿ, ಗೊಂದಲ ಬಗೆಹರಿಸಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಂಚಾಕ್ಷರಯ್ಯ, ಬೆಳಗುಂಬ ಪ್ರಭಾಕರ್, ಧನಿಯಾಕುಮಾರ್, ಕೆ.ಪಿ.ಮಹೇಶ, ರೈತ ಸಂಘ ಸೇರಿದಂತೆ ಹಲವರು ಹಾಜರಿದ್ದರು.