ಕನ್ನಡದ ಖ್ಯಾತ ಲೇಖಕಿ, ನಾಡೋಜಾ ಡಾ.ಕಮಲ ಹಂಪನಾ ಅವರು ಶನಿವಾರ ಬೆಳಗಿನ ಜಾವ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಮಲ ಹಂಪನಾ ಅವರು ತಮ್ಮ ಮಗಳ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆಯ ವೇಳೆಗೆ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಕಮಲ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಮಲ ಹಂಪನಾ ಪತಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕಮಲ ಹಂಪನಾ ಅವರು 1935 ಅಕ್ಟೋಬರ್ 28ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ಜನಿಸಿದರು. ರಂಗಧಾಮನಾಯಕ ಮತ್ತು ಲಕ್ಷ್ಮಮ್ಮ ಇವರ ತಂದೆ-ತಾಯಿ. ಚಳ್ಳಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಅಭ್ಯಾಸ ಮಾಡಿದ ಕಮಲ, ಪ್ರೌಢಶಾಲಾ ಶಿಕ್ಷಣವನ್ನು ತುಮಕೂರಿನಲ್ಲಿ ಪಡೆದರು. ಮೈಸೂರಿನಲ್ಲಿ ಪದವಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
1959ರಲ್ಲಿ ಕನ್ನಡ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಬೆಂಗಳೂರಿನ ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು.
ಕಮಲ ಅವರು ಹಂಪಾ ನಾಗರಾಜಯ್ಯ ಅವರನ್ನು ವಿವಾಹವಾದರು. ಕಮಲ ಹಂಪನ ಹಲವು ಕೃತಿಗಳನ್ನು ರಚಿಸಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಬಣವೆ, ರೆಕ್ಕೆ ಮುರಿದಿತ್ತು ಕಥಾ ಸಂಕಲನಗಳನ್ನು ಬರೆದಿದ್ದಾರೆ.
ತುರಂಗ ಭಾರತ-ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ್ ಮಹಿಳೆಯರು, ಅನೇಕಾಂತವಾದ, ನಾಡು, ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ, ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರೆ ಕರಾವಳಿ ರಾಣಿಯರು ಎಂಬ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.
ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರ, ಬೊಂಬಾಳೆ, ಗುಣದಂಕಕಾರ್ತಿ ಅತ್ತಿಮಬ್ಬೆ, ಅತ್ತಿಮಬ್ಬೆ ಮತ್ತು ಚಾಲುಕ್ಯ ಎಂಬ ವಿಮರ್ಶಾ ಕೃತಿಗಳನ್ನು ಬರೆದಿದ್ದಾರೆ.