ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ, ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಜೊತೆ ಮಾತುಕತೆ ನಡೆಸುತ್ತೇವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ತುಮಕೂರು ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಂಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹತ್ತಾರು ವರ್ಷಗಳ ನಿಮ್ಮ ಬೇಡಿಕೆ ಏನಿದೆ ಅದನ್ನು ಈಡೇರಿಸಲು ಬದ್ದರಾಗಿದ್ದೇವೆ. ಕಳೆದ ಫೆಬ್ರವರಿ ತಿಂಗಳಲ್ಲೇ ಎಸ್.ಟಿ ಪಟ್ಟಿಗೆ ಸೇರಿಸಲು ಪ್ರಯತ್ನಿಸಿದೆವು. ಆದರೆ ಅದು ಆಗಲಿಲ್ಲ. ಈಗ ಎಸ್.ಟಿ.ಕೆಟಗರಿಗೆ ಸೇರಿಸುವ ಸಂಬಂಧ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಇನ್ನೆರಡು ತಿಂಗಳಲ್ಲಿ ನಿಮ್ಮ ನ್ಯಾಯಯುತ ಬೇಡಿಕೆಯಾದ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಬೇಕೆಂಬುದನ್ನು ಈಡೇರಿಸುತ್ತೇವೆ. ನಿಮ್ಮದು ನ್ಯಾಯಯುತ ಬೇಡಿಕೆ. ಕಾಡುಗೊಲ್ಲ ಸಮುದಾಯದ ಹಟ್ಟಿಗಳಿಗೆ ಬಂದಿದ್ದೇನೆ. ನಿಮ್ಮ ಪರಿಸ್ಥಿತಿಯನ್ನು ನೋಡಿದ್ದೇನೆ. ಹೀಗಾಗಿ ಇನ್ನೆರಡು ತಿಂಗಳಲ್ಲಿ ಎಸ್.ಟಿ.ಪಟ್ಟಿಗೆ ಸೇರಿಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪುಟ ದರ್ಜೆಯ ಸ್ಥಾನವನ್ನು ಮೋದಿಯವರು ಕಲ್ಪಿಸಿದ್ದಾರೆ, ಜನರ ಹೃದಯದಲ್ಲಿ ಜೆಡಿಎಸ್ ಪಕ್ಷ ಇರುವುದರಿಂದ ರಾಜ್ಯದಲ್ಲಿ 19 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದರು.
ತುಮಕೂರಿನ ನಾಯಕರು ನನ್ನನ್ನು ಇಲ್ಲಿಂದಲೇ ಸ್ಪರ್ಧಿಸಲು ಒತ್ತಡ ತಂದಿದ್ದರು, ಈ ಹಿಂದೆ ದೇವೆಗೌಡರನ್ನು ಸೋಲಿಸಿದ ಜನ ಈ ಬಾರಿ ಜೆಡಿಎಸ್ ಕೈ ಹಿಡಿಯಲ್ಲೇ ಬೇಕು ಎಂದು ಭಾವಿಸಿ ವಿ.ಸೋಮಣ್ಣ ನವರ ಗೆಲುವಿಗೆ ಕಾರಣರಾಗಿದೀರ. ತುಮಕೂರು ಕ್ಷೇತ್ರದ ಜೊತೆಗೆ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರದಲ್ಲೂ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲೆಯ ಜನ ಸಹಕರಿಸಿದೀರಾ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ, ಅದರ ಭಾಗವಾಗಿಯೆ ಜೆಡಿಎಸ್ ಗೆ ಸಂಪುಟ ದರ್ಜೆಯ ಖಾತೆ ನೀಡಲಾಗಿದೆ. ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದಲ್ಲಿ ಅಗತ್ಯ ಉದ್ಯೋಗಾವಕಾಶಗಳನ್ನು ಕಲ್ಪಸಲು ಚಿಂತನೆ ನಡೆಸಲಾಗುವುದು. ರೈತರ ಕೊಬ್ಬರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಬಗೆಹರಿಸಲು ಸ್ವಲ್ಪ ಕಾಲಾವಕಾಶ ನೀಡಿ, ಕೊಬ್ಬರಿಗೆ 16 ರಿಂದ 17 ಸಾವಿರ ಬೆಂಬಲ ಬೆಲೆ ನೀಡಿದರೆ ಮಾತ್ರ ಅವರ ಬದುಕು ಸುಗಮವಾಗುತ್ತದೆ ಎಂದರು.
ಕೇಂದ್ರದಲ್ಲಿ ನಾನು ಕೃಷಿ ಸಚಿವನಾಗದೆ ಇರಬಹುದು. ಸ್ವಲ್ಪ ಕಾಲಾವಕಾಶದ ನಂತರ ರೈತರ ಸಮಸ್ಯೆಗಳ ಬಗ್ಗೆ ಕೇಂದ್ರದ ಇಲಾಖೆ ಜೊತೆ ಸಂಪರ್ಕ ಸಾಧಿಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತೆನೆ. ಯಾವುದೆ ಕಾರಣಕ್ಕೂ ರೈತರು ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಎಂಟಿ ಕೃಷ್ಣಪ್ಪ, ಸುರೇಶ್ ಗೌಡ, ಸುರೇಶ್ ಬಾಬು, ಜ್ಯೋತಿಗಣೇಶ್, ಮಾಜಿ ಶಾಸಕರಾದ ಸುಧಾಕರ್‌ಲಾಲ್, ಕೆ.ಎಂ. ತಿಮ್ಮರಾಯಪ್ಪ, ವೀರಭದ್ರಯ್ಯ, ಡಿ.ನಾಗರಾಜಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ,ಆರ್.ಸಿ. ಅಂಜನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಮತ್ತಿತರರು ಹಾಜರಿದ್ದರು.