ವೀಚಿ ಸಾಹಿತ್ಯ ಪ್ರತಿಷ್ಠಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ 2023ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕೇಂದ್ರ ವಲಯದ ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್. ರವಿಕಾಂತೇಗೌಡ ಅವರು ವಿಮರ್ಶಕ ಡಾ.ರವಿಕುಮಾರ್ ನೀಹ, ಡಾ.ಬಿ.ಜನಾರ್ದನ ಭಟ್ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ವೀಚಿ ಯುವ ಪ್ರಶಸ್ತಿಯನ್ನು ದಯಾನಂದ ಅವರಿಗೆ, ತತ್ವಪದಕಾರ ಮರಿರಂಗಯ್ಯ ಅವರಿಗೆ ಜಾನಪದ ಪ್ರಶಸ್ತಿ ಹಾಗೂ ಕನಕ ಕಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪ್ರಾಸ್ತಾವಿಕ ಮಾತನಾಡಿ, ತುಮಕೂರು ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಲಯದ ಸಾಕ್ಷೀಪ್ರಜ್ಞೆಯಂತೆ ಇದ್ದವರು ಪ್ರೊ.ಸಣ್ಣಗುಡ್ಡಯ್ಯ, ವೀ.ಚಿಕ್ಕವೀರಯ್ಯ ಮತ್ತು ಕೆ.ಆರ್.ನಾಯಕ್. ಈ ಮೂರು ಮಂದಿ ಅನ್ಯಾಯಗಳ ವಿರುದ್ಧ ಹೋರಾಟ ಮಾಡುತ್ತಿದ್ದರು. ಸಮಸ್ಯೆಗಳ ಬೆನ್ನು ಹತ್ತಿ ನ್ಯಾಯಾಲಯದಲ್ಲೂ ದಾವೆ ಹೂಡಿ ನ್ಯಾಯ ಕೊಡಿಸಿಕೊಡುತ್ತಿದ್ದರು ಎಂದರು.
ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ, ಕೆ.ಆರ್.ನಾಯಕ್ ಮತ್ತು ವೀ.ಚಿಕ್ಕವೀರಯ್ಯ ಈ ಮೂರು ಮಂದಿ ಭಿನ್ನ ನೆಲೆಯಿಂದ ಬಂದವರು. ಸಣ್ಣಗುಡ್ಡಯ್ಯ ಸಾಹಿತ್ಯ ವಲಯದಿಂದ, ಕೆ.ಆರ್.ನಾಯಕ್ ಟೈಲರ್ ಆಗಿ ಮತ್ತು ವೀ.ಚಿ. ಕೃಷಿ ಕ್ಷೇತ್ರದಿಂದ ಬಂದವರಾದರೂ ಹೋರಾಟದಲ್ಲಿ ಈ ಮಂದಿ ಜೊತೆಯಲ್ಲಿರುತ್ತಿದ್ದರು. ನಮ್ಮಂಥವರಿಗೆ ಮಾರ್ಗದರ್ಶಕರಾಗಿದ್ದರು.
ವೀಚಿ ಅವರು ಬೆಳಗಿನಿಂದ ಸಂಜೆಯವರೆಗೂ ಹೊಲದಲ್ಲಿ ಕೆಲಸ ಮಾಡಿ ಸಂಜೆ ಸೈಕರ್ ಏರಿ ನಗರಕ್ಕೆ ಬರುತ್ತಿದ್ದರು. ಸಣ್ಣಗುಡ್ಡಯ್ಯ ಮತ್ತು ಕೆ.ಆರ್.ನಾಯಕ್ ಜೊತೆ ಸೇರಿ ಸಾಹಿತ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಈ ಮೂವರು ತಾತ್ವಿಕವಾಗಿ ಗಟ್ಟಿಯಾಗಿದ್ದರು.
ಯುವ ಪೀಳಿಗೆ ಸಾಹಿತಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಯಾವುದೇ ವಿವಿ ಪ್ರಾಧ್ಯಾಪಕರಿಗಿಂತ ಮಿಗಿಲಾಗಿ ವೀಚಿ ಇದ್ದರು. ವೀಚಿ ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿರಲಿಲ್ಲ. ವೀಚ ಅವರದ್ದು ಪಾರದರ್ಶಕ ವ್ಯಕ್ತಿತ್ವವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ನಾಗಣ್ಣ, ತೀರ್ಪುಗಾರರಾದ ಡಾ.ಎಚ್.ದಂಡಪ್ಪ, ಡಾ.ಗೀತಾವಸಂತ, ಡಾ.ಎಸ್.ಗಂಗಾಧರಯ್ಯ ಹಾಜರಿದ್ದರು.