Sunday, September 8, 2024
Google search engine
Homeಮುಖಪುಟಕೊಲ್ಲಬಲ್ಲ ದಾಳಿಗೆ ಸಾಹಿತ್ಯದಲ್ಲಿ ಮದ್ದು ಇದೆ -ಪೊಲೀಸ್ ಮಹಾನಿರ್ದೇಶಕ ರವಿಕಾಂತೇಗೌಡ

ಕೊಲ್ಲಬಲ್ಲ ದಾಳಿಗೆ ಸಾಹಿತ್ಯದಲ್ಲಿ ಮದ್ದು ಇದೆ -ಪೊಲೀಸ್ ಮಹಾನಿರ್ದೇಶಕ ರವಿಕಾಂತೇಗೌಡ

ಇಂದು ಮನುಷ್ಯನ ಇತಿಹಾಸದಲ್ಲಿ ಅತ್ಯಂತ ಸುಲಭವಾಗಿ ಕೊಲ್ಲಬಲ್ಲ ಆಯುಧಗಳನ್ನು ಈಗ ಕಂಡುಹಿಡಿದು ಬಿಟ್ಟಿದ್ದೇವೆ. ಒಂದೇ ಸಾರಿಗೆ ಲಕ್ಷಾಂತರ ಜನರನ್ನು ಕೊಲ್ಲುವಂತಹ ಆಯುಧಗಳು ನಮ್ಮಲ್ಲಿವೆ. ಒಂದು ಬಾಂಬ್ ಹಾಕಿದರೆ ಇಡೀ ಕಟ್ಟಡವೇ ನಾಮಾವಶೇಷವಾಗುವಂತಹ ಶಸ್ತ್ರಾಸ್ತ್ರಗಳು ನಮ್ಮಲ್ಲಿವೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕೇಂದ್ರ ವಲಯದ ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್.ರವಿಕಾಂತೇ ಗೌಡ ಆತಂಕ ವ್ಯಕ್ತಪಡಿಸಿದರು.

ವೀಚಿ ಸಾಹಿತ್ಯ ಪ್ರತಿಷ್ಟಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತುಮಕೂರು ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರಶಸ್ತಿ, ವೀಚಿ ಯುವಸಾಹಿತ್ಯ ಪ್ರಶಸ್ತಿ, ಕನಕ ಕಾಯಕ ಪ್ರಶಸ್ತಿ ಮತ್ತು ವೀಚಿ ಜಾನಪದ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಬಳಸುವುದರಲ್ಲಿ ಅಷ್ಟರ ಮಟ್ಟಿಗೆ ನಾವು ಪರಿಣಿತಿಯನ್ನು ಪಡೆದಿದ್ದೇವೆ. ಅಷ್ಟರ ಮಟ್ಟಿಗೆ ನಮ್ಮ ವೈರಿಯನ್ನು ಧ್ವಂಸಗೊಳಿಸಲು ನಮ್ಮ ಮೆದುಳು, ಹೃದಯ, ಶ್ವಾಸಕೋಶ ತಯಾರಾಗಿಬಿಟ್ಟಿವೆ. ಇದಕ್ಕೆ ವಿರುದ್ಧದ ಪ್ರಕ್ರಿಯೆ ಎಲ್ಲಿದೆ ಎಂದರೆ ಒಂದು ಶ್ರೇಷ್ಟವಾದ ಕಾವ್ಯದಲ್ಲಿ, ಕಥನದಲ್ಲಿ, ಜನಪದದ ಜೀವಾಂಶದಲ್ಲಿದೆ. ಇದನ್ನು ಮುನ್ನೆಲೆಗೆ ತರದೇ ಹೋದರೆ, ಇದನ್ನು ಯುವಪೀಳಿಗೆಗೆ ಹೇಳದೆ ಹೋದರೆ ನಮ್ಮೆಲ್ಲ ಸೂಕ್ಷ್ಮತೆಗಳು ನಾಶವಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ಯಾವುದೇ ನಾಗರಿಕ ಸಮಾಜದಲ್ಲಿ ಅನೇಕರು ಹೇಳುವುದನ್ನು ಕೇಳಿದ್ದೇನೆ. ಏನ್ರಿ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ವಿದ್ಯಾವಂತರು ಪ್ರಶ್ನೆ ಮಾಡುತ್ತಾರೆ. ಕಾವ್ಯ ಬರೆಯುವಂತಹವರು ಸಹ ಈ ಪ್ರಶ್ನೆಯನ್ನೇ ಎತ್ತುತ್ತಾರೆ. ಯಾವುದೇ ನಾಗರಿಕ ಸಮಾಜದಲ್ಲಿ ಪೊಲೀಸರ ಪಾತ್ರ ಕನಿಷ್ಟ ಪ್ರಮಾಣದಲ್ಲಿರಬೇಕು. ಅದು ಹೆಚ್ಚು ನಾಗರಿಕವಾದ ಸಮಾಜವಾಗಿರುತ್ತದೆ ಎಂದರು.

ನಮ್ಮ ಪರಿಮಿತಿ ಹೇಗಿದೆ ಅಂದ್ರೆ ಪೊಲೀಸರ ಪಾತ್ರ ಗರಿಷ್ಟವಾಗಿರಬೇಕು ಎಂಬ ನಿರೀಕ್ಷೆ ಏನಿದೆ, ಅಂಥ ಸಮಾಜದಲ್ಲಿ ಕಾವ್ಯಕ್ಕೆ, ಕಲೆಗೆ, ಸಂಗೀತಕ್ಕೆ ಸ್ಕೋಪ್ ಕಡಿಮೆ ಇರುತ್ತದೆ ಎಂದು ಭಾವಿಸುತ್ತೇನೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ದಾರಿ ಹೇಗಿರಬೇಕೆಂದು ಅಂಥ ನಿರ್ಧರಿಸುವುದುವ ಹೆಚ್ಚು ಒಳ್ಳೆಯದು ಎಂದು ಹೇಳಿದರು.

ಕಾವ್ಯವನ್ನು ಓದಬೇಕು. ಅಂಥ ಕಾವ್ಯವನ್ನು ಓದಿಸಬೇಕು. ಅಂಥದನ್ನು ಮಕ್ಕಳಿಗೆ ತಿಳಿಯಹೇಳಬೇಕು. ಆಗ ಈ ಬದುಕು ಹೆಚ್ಚು ಸಹನೀಯವಾಗುತ್ತದೆ. ನಮಗೆ ನಾವೇ ಪ್ರೀತಿಸಿಕೊಳ್ಳುವುದರ ಜೊತೆಗೆ ಬೇರೆಯವರನ್ನೂ ಸಹ ಪ್ರೀತಿಸುವಂತಹ ಬೇರೆಯವರನ್ನೂ ಅಪ್ಪಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಆಗ ಪೊಲೀಸರಿಗೆ ಕೆಲಸ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿತ್ರಕತೆ, ಸಂಗೀತ ಕಾಣಿಸುತ್ತದೆ. ಅದು ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಸಹನೀಯಗೊಳಿಸುತ್ತದೆ. ನಾವು ದೊಡ್ಡ ಆಸೆಗಳೊಂದಿಗೆ ಬದುಕುವುದನ್ನು ಕಲಿಸುತ್ತದೆ. ನಾವು ನಮ್ಮ ಹೃದಯದೊಳಗೆ, ಶ್ವಾಸಕೋಶದ ಒಳಗೆ ಏನು ಬದಲಾವಣೆಯನ್ನು ಆಗಲು ಬಯಸುತ್ತೇವೆಯೋ ಅದು ಒಂದು ಆಗುತ್ತದೆ ಎಂಬ ಆಶಾಭಾವನೆಯಲ್ಲಿರುತ್ತೇವೆ ಎಂದರು.

ಸಾಹಿತ್ಯವನ್ನು ಒಂದು ಗಂಭೀರವಾದ ಶೃಜನಶೀಲ ಕ್ರಿಯೆಯಾಗಿ ಪರಿಗಣಿಸಿದವರು ಯಾವತ್ತೂ ಕೂಡ ನಿರಾಶವಾದಕ್ಕೆ ಜಾರುವುದಿಲ್ಲ. ಜಾರಲೂಬಾರದು. ನನ್ನ ಸಹಜೀವಿಗಳು ಎಂದು ಪರಿಭಾವಿಸುವ ಕೆಲಸವನ್ನು ಸಾಹಿತ್ಯ, ಕಲೆ ಮಾಡುತ್ತಿರುತ್ತದೆ. ಹೀಗಾಗಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular