ಸಮಾಜದಲ್ಲಿ ವ್ಯಕ್ತಿ ಪರಿಶ್ರಮಪಟ್ಟರೆ ಉನ್ನತ ಮಟ್ಟದ ಸಾಧನೆ ಮಾಡಬಹುದು. ಭಾರತಕ್ಕೆ ಸ್ವಾತಂತ್ರ್ಯ ಬರಲು ಶ್ರಮಿಸಿದ ಸಾವಿರಾರು ಹೋರಾಟಗಾರರ ಪರಿಶ್ರಮದಿಂದ ಇಂದು ನಾವೆಲ್ಲಾ ನೆಮ್ಮದಿಯಾಗಿದ್ದೇವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಎಲ್.ಮುಕುಂದರಾಜ್ ಹೇಳಿದರು.
ತುಮಕೂರು ತಾಲೂಕು ಇತಿಹಾಸ ಪ್ರಸಿದ್ದ ಕೈದಾಳದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ಬೂರು ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಬರೆದುಕೊಟ್ಟಿದ್ದರಿಂದ ನಾವೆಲ್ಲ ಸಮಾನತೆಯಿಂದ ಬದುಕುತ್ತಿದ್ದೇವೆ. ಆದ್ದರಿಂದ ಸಂವಿಧಾನವೇ ನಮ್ಮ ಧರ್ಮವಾಗಿದೆ ಪೂಜೆ, ಜಪ, ತಪ ಮಂತ್ರಾದಿಗಳಿಂದ ನಮಗೆ ಅನ್ನಸಿಗುವುದಿಲ್ಲ. ನಾವು ಕಲಿಯುವ ಶಿಕ್ಷಣ ನಮಗೆ ಅನ್ನದ ಮಾರ್ಗವಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಚನ್ನಾಗಿ ಅಧ್ಯಯನ ಮಾಡಬೇಕು. ಜೊತೆಗೆ ನಮ್ಮ ಅಸ್ಮಿತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಕೆಲವು ಮತೀಯ ಶಕ್ತಿಗಳು ನಮ್ಮ ಜೀವನ ಕ್ರಮವನ್ನೇ ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ಪರಿವರ್ತನೆಯ ಕ್ರಾಂತಿಕಾರಿ ಆಡಳಿತವನ್ನು ಮರೆಮಾಚಲು ಮೈಸೂರು ರಾಜ್ಯಕ್ಕೆ ಅಷ್ಟೇನೂ ಶ್ರಮಹಾಕದ ವಿಶ್ವೇಶ್ವರಯ್ಯ ಅವರನ್ನು ವೈಭವೀಕರಿಸಲಾಗಿದೆ. ಈ ಸುಳ್ಳಿನ ಇತಿಹಾಸದ ಬಗ್ಗೆ ನಾವು ಜಾಗೃತರಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೂತನ ಸದಸ್ಯರಾದ ಸಿದ್ರಾಮ ಹೊನ್ನಲ್ಲು, ಅಕ್ಜ ಪ್ರಕಾಶನದ ವಿಷಕಂಠೇಗೌಡ, ಬೇಗೂರು ಹುಚ್ಚೇಗೌಡ, ಸಿಳ್ಳೇಖ್ಯಾತ ಸಮುದಾಯದ ಜಿಲ್ಲಾ ಮುಖಂಡ ಲಕ್ಷ್ಮಿನರಸಿಂಹಯ್ಯ, ಪ್ರಾಂಶುಪಾಲ ಡಿ. ಕೃಷ್ಣ, ಪ್ರಾಧ್ಯಾಪಕರಾದ ಗೊವಿಂದರಾಜು, ಮಂಜುನಾಥ್, ಜಿ.ಕೆ. ನಾಗಣ್ಣ, ನರಸಿಂಹರಾಜು ಗ್ರಂಥಪಾಲಕ ದೇವರಾಜು ಹಾಜರಿದ್ದರು.