ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಲಧಿಕಾರಿಗಳು ಇಲ್ಲದಿರುವನ್ನು ಗಮನಿಸಿದ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಅವರಿಗೆ ಕರೆ ಮಾಡಿ ರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಮಧುಗಿರಿ ತಾಲೂಕು ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ಆಸ್ವಸ್ಥರಾಗಿರುವವರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ಶುಕ್ರವಾರ ಭೇಟಿ ಮಾಡಿದ ಸಚಿವ ಸೋಮಣ್ಣ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಯಾವ ಅಧಿಕಾರಿಗಳು ಇರಲಿಲ್ಲ ಇದರಿಂದ ಸಿಡಿಮಿಡಿಗೊಂಡ ಸಚಿವರು ಕೂಡಲೇ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಅವರಿಗೆ ಮೊಬೈಲ್ ಕರೆ ಮಾಡಿ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಏನ್ರಿ ಅಧಿಕಾರಿಗಳು ಯಾರೂ ಇಲ್ಲ. ಚಿನ್ನೇನಹಳ್ಳಿಗೆ ನಾನು ಬರ್ತೀನಿ ಅಂತ ಹೇಳಿಲ್ಲ. ಇಲ್ಲಿ ಯಾವೋನು ಬಂದಿಲ್ಲ. ಡಿಎಚ್ಒಗೂ ಕುಡಿಯುವ ನೀರಿಗೂ ಏನು ಸಂಬಂಧ? ಕಲುಷಿತ ನೀರು ಕೊಟ್ಟಿರೋರು ಆರ್.ಡಿ.ಪಿ.ಆರ್ ನೋರು. ಇದು ನಿಮಗೆ ಸಂಬಂಧಿಸಿದ್ದು, ನೀವು ಅಲ್ಲೆಲ್ಲೋ ಹೋದರೆ ಇಲ್ಲ್ಯಾರಪ್ಪ ನೋಡೋರು. ನಾನು ಒಬ್ಬ ಎಂಪಿ ಇದ್ದೀನಿ, ಇಲ್ಲಿ ನಿಮ್ಮ ಅಧಿಕಾರಿಗಳು ಯಾರೊಬ್ಬರೂ ಇಲ್ಲ. ಇಲ್ಲಿ ಡಿಎಚ್ಒ ಇದಾರೆ, ಕಚೇರಿ ಸಿಬ್ಬಂದಿ ಇದಾರೆ. ಈ ಇಬ್ಬರನ್ನು ಬಿಟ್ಟರೆ ಯಾರೂ ಗತಿ ಇಲ್ಲ. ಯಾರೂ ಇಲ್ಲ ಪ್ರಭು. ಇದು ಆಗಬಾರದು, ಇದು ಒಳ್ಳೆಯದಲ್ಲ ಎಂದು ಸಿಇಓ ಗೆ ಎಚ್ಚರಿಕೆ ನೀಡಿದರು.
ನೀವು ಯಾವ ಹಿನ್ನೆಲೆಯಿಂದ ಬಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ, ಯಾವ ಅಧಿಕಾರಿಯೂ ಗತಿ ಇಲ್ಲ. ಡಿಎಚ್ಒ ಗೆ ಏನ್ರಿ ಸಂಬಂಧ, ಅವರನ್ನು ನೋಡಿದ್ರೆ ಏನು ಮಾಡಲು ಆಗದವನ ರೀತಿಯಲ್ಲಿದ್ದಾರೆ. ಕೆಲಸ ಮಾಡ್ತಾನೆ ಅನ್ನೋ ಭಾವ್ನೆನೂ ಇಲ್ಲ. ಯಾವುದೋ ಕಾಲ್ದಲ್ಲಿ ಇದ್ದಾನೆ ಅನ್ನುವಂತೆ ಕಾಣುತ್ತಾನೆ ಯಾವೋನು ಇಲ್ರಿ ಎಂದು ಅಸಮಾಧಾನ ಹೊರಹಾಕಿದರು. ಡಿಸಿಗೆ ಪೋನ್ ತಗೊಳ್ರಿ ಎಂದು ಕೋಪೋದ್ರಿಕ್ತರಾದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೂ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಇಲ್ಲಿ ಯಾವ ಅಧಿಕಾರಿಗಳು ಬಂದಿಲ್ಲ. ನೀವು ಜಿಲ್ಲಾಸ್ಪತ್ರೆಗೆ ಬರುತ್ತೇನೆಂದು ಹೇಳಿದ್ರಿ ಆದರೆ ನೀವು ಇಲ್ಲ. ಯಾವೊಬ್ಬ ಅಧಿಕಾರಿಗಳು ಇಲ್ಲ. ಹೀಗೆ ಸಂಘರ್ಷ ಇಟ್ಟುಕೊಳ್ಳಬೇಡಿ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಮಾಜಿ ಶಾಸಕ ವೀರಭದ್ರಯ್ಯ ಮೊದಲಾದವರು ಇದ್ದರು.