ಆರೋಗ್ಯ ರಕ್ಷಣೆ ವ್ಯಕ್ತಿಗತವಾಗಿ ಉಳಿದಿಲ್ಲ. ಹಾಗಾಗಿ ವಾಯುಗುಣ ವೈಪರೀತ್ಯ ಮತ್ತು ಆರೋಗ್ಯದ ಕುರಿತ ಸರ್ಕಾರಗಳ ನೀತಿ, ನಿರೂಪಣೆಗಳ ಬಗ್ಗೆ ಸಾರ್ವಜನಿಕ ವಲದಲ್ಲಿ ಚರ್ಚೆಯಾಗಬೇಕಿದೆ ಎಂದು ಜಾಗೃತ ಕರ್ನಾಟಕದ ಡಾ.ಎಚ್.ವಿ.ವಾಸು ಹೇಳಿದರು.
ತುಮಕೂರಿನ ಐಎಂಎ ಸಭಾಗಂಣದಲ್ಲಿ ಗಾಂಧೀ ಸಹಜ ಬೇಸಾಯ ಆಶ್ರಮ, ಭಾರತೀಯ ವೈದ್ಯಕೀಯ ಸಂಘ, ತುಮಕೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಸಂಯುಕ್ತ ಆಶ್ರಯದಲ್ಲಿ ‘ವಾಯುಗುಣ ವೈಪರಿತ್ಯ ಕೃಷಿ ಸಾವಲುಗಳು, ಸಮಸ್ಯೆಗಳು ಹಾಗೂ ಮಾಲಿಕೆಯ ೪ನೇ ಸಮಾಲೋಚನಾ ಕಾರ್ಯಾಗಾರ ಮತ್ತು ‘ವಾಯುಗುಣ ವೈಪರೀತ್ಯ ಮತ್ತು ಆರೋಗ್ಯ ಘೋಷಣೆ’ ವಿಷಯ ಕುರಿತು ನಡೆದ ಸಭೆಯಲ್ಲ್ಲಿ ಅವರು ಮಾತನಾಡಿದರು.
ಪರಿಸರ ಉಳಿಸುವ ವಾಗ್ದಾನ ರಾಜಕೀಯ ಪಕ್ಷಗಳ ಪ್ರಣಾಳಿಕೆ ಸೇರುವಂತಾಗಬೇಕು. ಪರಿಸರ ಮತ್ತು ಆರೋಗ್ಯ ಕುರಿತು ತರಬೇಕಾದ ಯೋಜನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆವಂತೆ ಮಾಡಬೇಕು. ಭೂಮಿ ಕೇವಲ ಮನುಷ್ಯರಿಗೆ ಸೇರಿದಲ್ಲ, ಸಕಲ ಜೀವ ಚರಾಚರಗಳಿಗೆ ಸೇರಿದ್ದು ಎಂಬುದನ್ನು ಮನಗಾಣಬೇಕಿದೆ. ಮರ ಕತ್ತರಿಸಿದರೆ ಜಿಡಿಪಿ ಏರುತ್ತದೆ ಎಂಬ ಲಾಭ ಕೋರತನದ ಲೆಕ್ಕಚಾರ ಅವಮಾನ ವೈಪರಿತ್ಯಕ್ಕೆ ಕಾರಣವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಸಮುದಾಯ ಆರೋಗ್ಯದ ಮಹತ್ವ ಜಗತ್ತಿಗೆ ಅರಿವಾಗಿದೆ. ಆದರೆ ಹೆಚ್ಚು ಆದಾಯದ ಹಿಂದೆ ಬಿದ್ದು ಇಂತಹ ವಿಷಯವನ್ನು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳದ ದುಸ್ಥಿಯಲ್ಲಿದ್ದೇವೆ ಎಂದು ಹೇಳಿದರು.
ನಮ್ಮ ಸುತ್ತಮುತ್ತಲಿನ ವತಾವರಣ ಹೇಗಿರುತ್ತದೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಈ ಬಗ್ಗೆ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು. ಮನುಷ್ಯನಿಗೆ ಬಂದಿರುವ ಖಾಯಿಲೆಗಳಲ್ಲಿ ಹೆಚ್ಚಿನ ಪಾಲು ಪ್ರಾಣಿಗಳಿಂದಲೇ ಬಂದಂಥವು. ಈ ಹಿನ್ನೆಲೆಯಲ್ಲಿ ಪರಿಸರದ ಆರೋಗ್ಯವೂ ಮಖ್ಯವಾಗುತ್ತದೆ ಎಂದರು.
ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಜಗತ್ತಿನ 50 ಮಾಲಿನ್ಯಯುಕ್ತ ನಗರಗಳ ಸಾಲಿನಲ್ಲಿ 30 ನಗರಗಳು ಭಾರತದಲ್ಲಿಯೇ ಇವೆ. ಜಗತ್ತಿನಲ್ಲಿ ಶೇ. 46ರಷ್ಟು ನದಿಗಳು ಮಾಲಿನ್ಯಗೊಂಡಿವೆ. 1.6 ಮಿಲಿಯನ್ ಜನರು ಪರಿಶುದ್ಧ ಗಾಳಿಯ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಪ್ ನಿರ್ಣಯಗಳಿಗೆ ಭಾರತ ಸಹಿ ಹಾಕಬೇಕು ಎಂದು ಒತ್ತಾಯಿಸಿದರು.
ಅತೀ ಹೆಚ್ಚಿನ ಪ್ರಮಾಣದಲ್ಲಿ ಹವಮಾನ ವೈಪರೀತ್ಯಕ್ಕೆ ತುತ್ತಾಗಿರುವ ದೇಶಗಳಲ್ಲಿ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಆರೋಗ್ಯ ಸೇವೆಗಳು ಶೇ. 70 ರಷ್ಟು ನಗರ ಕೇಂದ್ರಿತವಾಗಿವೆ. ನಮ್ಮಲ್ಲಿ ಜೀವ ವೈವಿಧ್ಯತೆಗೆ ಅನುಗುಣವಾಗಿ ಭೂಮಿಯಿಲ್ಲ. ಬಂಡವಾಳಶಾಹಿಗಳ ವ್ಯಾಪಾರಕ್ಕೆ ಅನುಕೂಲವಾಗುವಂತೆ ಪರಿಸರ ಸಂಬಂಧಿ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಹೇಳಿದರು.
ನಾವು ಪ್ರತೀ ಸಮಸ್ಯೆಗಳಿಗೆ ವೈಯಕ್ತಿಕ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಕಡೆ ಸಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಮಹೇಶ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್.ಎಸ್. ಅನಂತ್, ಔಷಧ ವ್ಯಾಪಾಯಿಗಳ ಸಂಘದ ಕಾರ್ಯದರ್ಶಿ ಎನ್.ಎಸ್. ಪಂಡಿತ್ ಜವಹರ್, ಗಾಂಧಿ ಸಹಬೇಸಾಯ ಆಶ್ರಮದ ಡಾ.ಮಂಜುನಾಥ್, ಡಾ.ರಂಗಸ್ವಾಮಿ, ಎನ್.ಎಸ್.ಸ್ವಾಮಿ, ರಾಮಕೃಷ್ಣಪ್ಪ, ಶಿವಲಿಂಗಯ್ಯ, ಡಾ.ಗಂಗಾಧರ್, ಪ್ರತಾಪ್, ನಾಗರಾಜ್, ಕೃಷಿಕ ರವೀಶ್, ಕಿಶೋರ್ ಇನ್ನಿತರರು ಹಾಜರಿದ್ದರು.
ಕಾಪ್ ನಿರ್ಣಯಗಳಿಗೆ ಭಾರತ ಸಹಿ ಹಾಕಬೇಕು. ಪ್ರಕೃತಿದತ್ತವಾದ ಬದುಕಿನ ಕಡೆಗೆ ಸಾಗಬೇಕು, ಇದಕ್ಕೆ ಸರ್ಕಾರ ಒತ್ತು ನೀಡಬೇಕು. ಈ ರೀತಿಯ ಕಾರ್ಯಾಗಾರಗಳನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯಬೇಕು. ಗ್ರಾಮೀಣ ಭಾಗದಲ್ಲಿರುವ ವೈದ್ಯಕೀಯ ಸೇವೆಗಳನ್ನು ಸುಧಾರಿಸಬೇಕು ಎಂಬ ನಾಲ್ಕು ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.