ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವಿಗೆ ಕಾರಣರಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪ, ಕರ್ತವ್ಯ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿ ಆರೋಪದ ಮೇಲೆ ಮೂವರು ವೈದ್ಯರನ್ನು ವಜಾಗೊಳಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮೂವರು ವೈದ್ಯರನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಎನ್.ಎಚ್.ಎಂ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಆರೋಗ್ಯ ಸಂಘದ ಕರಾರು ಒಪ್ಪಂದದ ಪ್ರಕಾರ ಕರ್ತವ್ಯಲೋಪ, ಕರ್ತವ್ಯ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಫೆ.27ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಪೂಜಾ, ಶುಶ್ರೂಷನಾಧಿಕಾರಿ ಜಿ.ಪದ್ಮಾವತಿ ಮತ್ತು ಒ.ಟಿ.ತಂತ್ರಜ್ಞ ಜಿ.ಆರ್.ಕಿರಣ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಫೆ.24ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ತನಿಖಾ ತಂಡ ಪಾವಗಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳಲ್ಲಿ ಸೋಂಕು ಹರಡಿರುವ ಚಿಹ್ನೆಗಳು ಕಂಡುಬಂದಿದೆ. ಹಾಗೆಯೇ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಶಸ್ತ್ರಚಿಕಿತ್ಸಾ ಕೊಠಡಿಯನ್ನು ಭೂಮೀಕರಣ ಮಾಡದೇ ಇದ್ದಾಗ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಲಕರಣೆಗಳನ್ನು ಆಟೋ ಕ್ಲೇವ್ ಮಾಡದೇ ಇದ್ದ ಸಂದರ್ಭದಲ್ಲಿ ಈ ರೀತಿಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಮೂರು ಮರಣಕ್ಕೆ ಕಾರಣವಾಗಿರುವುದು ಕಂಡು ಬಂದಿರುತ್ತದೆ ಎಂದು ಹೇಳಿದ್ದಾರೆ.
ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಕೂಡಲೇ ಜಾರಿಗೆ ಬರುವಂತೆ ಇಬ್ಬರು ಶುಶ್ರೂಷಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನಾಗರತ್ನ ಮತ್ತು ಮಾರಕ್ಕ ಎನ್ನುವ ಶುಶ್ರೂಷಾಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ತಿಳಿಸಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಡಾ.ಎಎಸ್ಐ ಬಾಬು ಅವರನ್ನು ಸಾರ್ವಜನಿಕ ಆಸ್ಪತ್ರೆ ಪಾವಗಡ ಇಲ್ಲಿಗೆ ಆಡಳಿತ ಪ್ರಭಾರವನ್ನು ವಹಿಸಿ ಆದೇಶಿಸಲಾಗಿದೆ. ಡಾ.ಕಿರಣ್ ಅವರನ್ನು ವೈಎನ್.ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ ವೈಎನ್ ಹೊಸಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಕಿರಣ್ ಕುಮಾರ್ ಸಾರ್ವಜನಿಕ ಆಸ್ಪತ್ರೆಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಖಾಯಂ ನೌಕರರಾದ ಡಾ.ಕಿರಣ್, ಡಾ.ನಮ್ರತಾ, ನಾಗರತ್ನಾ, ಮಾರಕ್ಕ, ಡಾ.ಪೂಜಾ, ಪದ್ಮಾವತಿ ಮತ್ತು ಬಿ.ಆರ್. ಕಿರಣ್ ಅವರಿಗೆ ಕಾರಣಕೇಳಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾವಗಡ ತಾಲ್ಲೂಕು ವೀರ್ಲಗೊಂದಿ ಗ್ರಾಮದ ಅನಿತಾ, ರಾಜವಾಂತಿ ಗ್ರಾಮದ ಅಂಜಲಿ ಮತ್ತು ಬ್ಯಾಡನೂರು ಗ್ರಾಮದ ನರಸಮ್ಮ ಮೃತಪಟ್ಟಿದ್ದರು.
ಐದು ದಿನದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಪಾವಗಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.