ತುಮಕೂರು ಜಿಲ್ಲೆಯ ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೂವರು ಮಹಿಳೆಯರು ಸಾವನ್ನಪ್ಪಿದ್ದು ಸಮಗ್ರ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಗಳಿಗೆ ತಲಾ 10 ಸಾವಿರ ರೂ ಪರಿಹಾರ ನೀಡಬೇಕು ಎಂದು ಡಿ.ವೈ.ಎಫ್.ಐ ತುಮಕೂರು ಜಿಲ್ಲಾ ಸಮಿತಿ ಸಂಚಾಲಕ ಹಾಗೂ ಯುವ ವಕೀಲ ಈ.ಶಿವಣ್ಣ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿ ದೊಡ್ಡ ಮಟ್ಟದಲ್ಲಿದ್ದು, ಇಂತಹ ಸಾವುಗಳಿಗೆ ಕಾರಣವಾಗಿರುತ್ತದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಸಹ ವೈದ್ಯರ ನಿರ್ಲಕ್ಷ್ಯದಿಂದ ಹಲವಾರು ಹೆಣ್ಣು ಮಕ್ಕಳು ಸಾವಿಗೀಡಾಗಿರುತ್ತಾರೆ. ಆಸ್ಪತ್ರೆಯಲ್ಲಿ ಅಗತ್ಯವಿರುವ ಸಿಬ್ಬಂದಿ ಇಲ್ಲದಿರುವುದು ಖಾಸಗಿ ಆಸ್ಪತ್ರೆಗಳ ಲಾಬಿ ಹೆಚ್ಚಾಗಲು ಕಾರಣವಾಗಿದೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳ ಮರ್ಜಿಗೆ ಒಳಗಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಶಾಸಕರ ನಿರ್ಲಕ್ಷ್ಯ ಎದ್ದುಕಾಣುತ್ತದ ಎಂದು ಆರೋಪಿಸಿದ್ದಾರೆ.
ಬಹುತೇಕ ಬಡಜನರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿನ ವೈದ್ಯರು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಎಂದು ಅಸಡ್ಡೆ ತೋರಿಸುತ್ತಾರೆ.
ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾದ ರಾಜವಂತಿ ಗ್ರಾಮದ ಅಂಜಲಿ, ವಿರ‍್ಲಗೊಂದಿ ಗ್ರಾಮದ ಅನಿತಾ ಮತ್ತು ಬ್ಯಾಡನೂರು ಗ್ರಾಮದ ನರಸಮ್ಮ ಅವರು ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ವೈದ್ಯರು ಮತ್ತು ಶುಶ್ರೂಷಕರು ಸೌಜನ್ಯದಿಂದ ವರ್ತಿಸಬೇಕು. ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಾವಗಡ ಗಡಿನಾಡ ಭಾಗವಾಗಿದ್ದು ತಾಯಿ ಮತ್ತು ಮಕ್ಕಳ ಆಸ್ಪತೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ರೋಗಿಗಳಿಗೆ ಅನುಕೂಲ ಮಾಡಬೇಕು ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದಿದ್ದಾರೆ.