ತುಮಕೂರು ಜಿಲ್ಲೆಯ ಪಾವಗಡದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಫೆಬ್ರವರಿ 22ರಂದು ಹೆರಿಗೆಗಾಗಿ ದಾಖಲಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಆಪರೇಷನ್ ಆಗಿ ಐದು ದಿನದ ಬಳಿಕ ಮೂವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮೃತರ ಸಂಬಂಧಿಕರು ನ್ಯಾಯ ಒದಗಿಸುವಂತೆ ಪಾವಗಡದ ಸರ್ಕಾರಿ ಆಸ್ಪತ್ರೆ ಮುಂದೆ ಇಂದು ಪ್ರತಿಭಟನೆ ನಡೆಸಿದರು.
ಫೆಬ್ರವರಿ 22ರಂದು ಏಳು ಮಂದಿ ಗರ್ಭಿಣಿಯರು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ 4 ಮಂದಿ ಗರ್ಭಿಣಿಯರು ಸಿಸೇರಿಯನ್ ಗೆ ಒಳಗಾದರೆ, ಒಬ್ಬ ಗರ್ಭಿಣಿಗೆ ಸಹಜ ಹೆರಿಗೆ ಆಗಿತ್ತು. ಮತ್ತೊಬ್ಬ ಮಹಿಳೆಗೆ ಗರ್ಭಕೋಶ ಆಪರೇಷನ್ ಆಗಿತ್ತು ಎಂದು ಹೇಳಲಾಗಿದೆ.
ಸಹಜ ಹೆರಿಗೆಯಾದ ನಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಅನಿತಾ (30) ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಯನ್ನು ಪಡೆದ ದಿನವೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಸಿಸೇರಿಯನ್ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ರಾಜವಾಂತಿ ಗ್ರಾಮದ ಅಂಜಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 24ರಂದು ಅಂಜಲಿ (20) ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಪಾವಗಡ ಸರ್ಕಾರಿ ಆಸ್ಪತ್ರೆಗೆ ಬ್ಯಾಡನೂರು ಗ್ರಾಮದ ನರಸಮ್ಮ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಗೆ ಹೋಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನರಸಮ್ಮ ಅವರನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನರಸಮ್ಮ (40) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.