Thursday, May 30, 2024
Google search engine
Homeಮುಖಪುಟಗತಿಸಿದ ಕವಿತಾಕೃಷ್ಣರಿಗೊಂದು ವಿದಾಯದ ನುಡಿ

ಗತಿಸಿದ ಕವಿತಾಕೃಷ್ಣರಿಗೊಂದು ವಿದಾಯದ ನುಡಿ

ಕವಿತಾಕೃಷ್ಣ ಅವರು ನಿಧನರಾಗಿದ್ದಾರೆ. ಉತ್ತಮ ಭಾಷಣಕಾರರು ಆಗಿದ್ದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ತುಮಕೂರಿನ ಕ್ಯಾತ್ಸಂದ್ರದ ಅವರ ಮನೆಯಲ್ಲಿ ಫೆಬ್ರವರಿ 11ರಂದು ನಿಧನರಾಗಿದ್ದಾರೆ. ಅವರ ಕುರಿತು ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್ ಬರೆದಿರುವ ಲೇಖನ ಇಲ್ಲಿದೆ.

ಕವಿತಾಕೃಷ್ಣ ಅವರನ್ನು ಭೇಟಿಯಾಗಿ ವಾರವೂ ಕಳೆದಿಲ್ಲ. ಕ್ಯಾತ್ಸಂದ್ರದ ಪೇಟೆ ಬೀದಿಯ ತಮ್ಮ ಮನೆಯಲ್ಲಿ ಮಲಗಿದ್ದ ಕವಿತಾಕೃಷ್ಣ ಅವರನ್ನು ನೋಡಲು ಹೋಗಿದ್ದೆ. ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಅಳುತ್ತಲೇ ಇದ್ದರು. ಕ್ಯಾನ್ಸರ್ ನಿಂದ ಹೈರಾಣಾಗಿದ್ದರೂ ಅವರ ಅಳು ಸಾವಿಗೆ ಹೆದರಿ ಬಂದಿದ್ದಲ್ಲ. ಬದಲಿಗೆ ಶ್ರೀಕೃಷ್ಣನ ಬಗ್ಗೆ ಖಂಡ ಕಾವ್ಯ ಬರಿಯಲು ಆಗುತ್ತಿಲ್ಲವಲ್ಲ ಎಂಬುದಾಗಿತ್ತು.ನಮ್ಮಿಬ್ಬರ ಗೆಳೆತನ 20 ವರ್ಷಕ್ಕೂ ಮೀರಿದ್ದು, ವಯಸ್ಸಿನಲ್ಲಿ ನನಗಿಂತ 25 ವರ್ಷಕ್ಕೆ ಹಿರಿಯರಾಗಿದ್ದರೂ ಸಮಕಾಲೀನರು ಎಂಬುವಷ್ಟು ಸಲಿಗೆ. ತುಮಕೂರಿನ ಹಳೆ ಡಿಡಿಪಿಐ ರಸ್ತೆಯಲ್ಲಿದ್ದ ನಮ್ಮ ಕಚೇರಿಗೆ ಬರುತ್ತಿದ್ದ ಕವಿತಾಕೃಷ್ಣ ಅವರು ಅಲ್ಲೇ ಪಕ್ಕದಲ್ಲಿದ್ದ ಶಿಕ್ಷಕರ ಭವನದ ಬಾಬಣ್ಣನ ಕ್ಯಾಂಟಿನ್ ನಲ್ಲಿ ಕಾಫಿ ಕುಡಿಯುತ್ತಾ, ಹರಟುತ್ತಾ, ಗಹಗಹಿಸಿ ನಗುತ್ತಾ, ತಮಾಷೆ ಮಾಡುತ್ತಾ, ಕೆಲವರನ್ನು ಮೆಚ್ಚುತ್ತಾ, ಮತ್ತೆ ಕೆಲವರನ್ನು ಚುಚ್ಚುತ್ತಾ, ನಗು, ತಮಾಷೆ, ಕೊನೆಯಲ್ಲಿ ಪರನಿಂದೆ ಮೂಲಕ ಆ ದಿನದ ಭೇಟಿ ಮುಕ್ತಾಯವಾಗುತ್ತಿತ್ತು.

ಕವಿತಾಕೃಷ್ಣ ಅವರಿಗೆ ಪುರಾಣದ ಬಗ್ಗೆ, ಇತಿಹಾಸದ ಬಗ್ಗೆ ಅಪಾರವಾದ ಜ್ಞಾನವಿತ್ತು. ಆದರೆ ತಮ್ಮ ಕೃತಿಯಲ್ಲಿ ಆ ಎಲ್ಲಾ ವಿಚಾರಗಳನ್ನು ವರ್ತಮಾನದೊಂದಿಗೆ ಮುಖಾಮುಖಿಯಾಗಿಸಲು ಆಗದೆ ಸೋಲುತ್ತಿದ್ದರು.ಒಬ್ಬ ಸತ್ವಶೀಲ ಲೇಖಕ ಪ್ರಭುತ್ವವನ್ನು ಪ್ರಶ್ನೆ ಮಾಡುತ್ತಲೇ ಇರುತ್ತಾನೆ. ಅದು ಬರೆಹದ ಮೂಲಕವಾಗಲಿ, ಭಾಷಣದ ಮೂಲಕವಾಗಲಿ ಹೊರ ಹೊಮ್ಮಬೇಕು. ವರ್ತಮಾನದೊಂದಿಗೆ ಮುಖಾಮುಖಿಯಾಗಲು ಆಗದೆ ಇದ್ದುದ್ದರಿಂದ ಸ್ವತಃ ಹಿಂದುಳಿದ ವರ್ಗದಿಂದ ಬಂದಿದ್ದರೂ ಕವಿತಾಕೃಷ್ಣ ಅವರಿಗೆ ಅಸಮಾನತೆ ಬಗ್ಗೆ, ಅಸ್ಪೃಶ್ಯತೆ ಬಗ್ಗೆ, ಶೋಷಿತರ ಪರವಾಗಿ ಬೀದಿಗಿಳಿದು ಹೋರಾಡಲು ಸಾಧ್ಯವಾಗಲೇ ಇಲ್ಲ.

ಮೈಸೂರು ದೊರೆಗಳ ಬಗ್ಗೆ, ಬ್ರಿಟಿಷರ ಬಗ್ಗೆ, ಅಂಬೇಡ್ಕರ್ ಬಗ್ಗೆ, ಏಕೀಕರಣದ ಬಗ್ಗೆ, ಭಾರತ ಪಾಕ್ ವಿಭಜನೆ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದರೂ ಅದನ್ನು ಈ ಹೊತ್ತಿನ ಪರಿಸ್ಥಿತಿಗೆ ಜೋಡಿಸಲು ಆಗುತ್ತಿರಲಿಲ್ಲ. ಸುಮಾರು 6 ದಶಕಗಳ ಕಾಲ ನೂರಾರು ಕೃತಿಗಳನ್ನು ರಚಿಸಿ ಕವಿತಾಕೃಷ್ಣ ಸಾಹಿತ್ಯ ಮಂದಿರ ಹುಟ್ಟು ಹಾಕಿ ಹಲವಾರು ಯುವ ಪ್ರತಿಭೆಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು.

ಅವರಿಗೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವಷ್ಟು ವಾಕ್ ಚಾತುರ್ಯ ಇತ್ತು. ಇವರ ಭಾಷಣ ಕೇಳಲು ಸಿದ್ಧ ಪ್ರೇಕ್ಷಕರು ಕೂಡ ಇದ್ದರು. ಪ್ರತಿಯೊಬ್ಬರನ್ನು ಖುಷಿಪಡಿಸಲು ಪ್ರಯತ್ನಿಸುತ್ತಿದ್ದರು. ನಿಷ್ಕಲ್ಮಶವಾಗಿ ಹೊಗಳುತ್ತಿದ್ದರು. ಒಂದರ್ಥದಲ್ಲಿ ಸಾಹಿತ್ಯ ಪರಿಚಾರಕರಾಗಿ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದರು.

ಮಠ ಮಂದಿರಗಳು, ಮಠಾಧೀಶರ ಬಗ್ಗೆ ಅಪಾರವಾದ ಗೌರವವಿತ್ತು. ನೂರಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ಎಲ್ಲರ ಒಡನಾಟ, ಪ್ರಭುತ್ವದ ಜೊತೆ ಒಡನಾಟವಿದ್ದರೂ ಕೂಡ ಸಾಹಿತ್ಯ ಲೋಕದ ದೃವತಾರೆಯಾಗಲಿಲ್ಲ. ಅವರು ಹೆಚ್ಚು ಬರೆದದ್ದು ನಿಜ. ಮೌಲ್ಯಯುತವಾದದ್ದು, ನಮ್ಮ ಅಂತರಂಗವನ್ನು ಮುಟ್ಟಿ ನೋಡಿಕೊಳ್ಳುವಂತಹ ಕೃತಿಗಳನ್ನು ಬರಿಯಲು ಆಗಲಿಲ್ಲ. ಇಷ್ಟಾದರೂ ಅವರನ್ನು ಪ್ರೀತಿಸುವ, ಆರಾಧಿಸುವ, ಗೌರವಿಸುವ ದೊಡ್ಡ ಗುಂಪೇ ತುಮಕೂರಿನಲ್ಲಿ ಇತ್ತು.

ಅವರು ಹಾಡುತ್ತಿದ್ದರು, ಶೃತಿ ಜ್ಞಾನ, ತಾಳದ ಬಗ್ಗೆ ಕರಾರುವಕ್ಕಾಗಿ ತಿಳಿದಿತ್ತು. ದಾಸ ಪರಂಪರೆ ಬಗ್ಗೆ ಒಳನೋಟಗಳಿತ್ತು. ಪುರಂದರದಾಸರೆಂದರೆ ಅವರಿಗೆ ಅಚ್ಚು ಮೆಚ್ಚು. ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತೆ ಯಶೋದಾಳ ಜೊತೆ ಹಲವಾರು ಬಾರಿ ಭೇಟಿಯಾಗಿದ್ದೇನೆ. ಗಂಟೆಗಟ್ಟಲೆ ನನ್ನ ಬಳಿ ಹಾಡಿಸಿದ್ದಾರೆ. ಅದರಲ್ಲೂ ಕನಕದಾಸರು, ಪುರಂದರದಾಸರು, ವಾದಿರಾಜು, ವಿಜಯ ವಿಠಲ ದಾಸರು ಹೀಗೆ ಹಲವಾರು ಕೃತಿಗಳನ್ನು ಹಾಡಿದ್ದೇನೆ. ದೇವರಾಯನದುರ್ಗಕ್ಕೆ ಟ್ರಿಪ್ ಕರೆದುಕೊಂಡು ಹೋಗಲು ಹೇಳಿದ್ದರು. ಒಂದು ಗಂಟೆಗಳ ಕಾಲ ಗಾನಬಜಾನ ಮಾಡುವ ಎಂದಿದ್ದರು. ಖುಷಿಯಿಂದ ಒಪ್ಪಿಕೊಂಡಿದ್ದೆ. ಅವರು ದಿನೇ ದಿನೇ ಸೊರಗುತ್ತಿದ್ದರು. ಕಡೆಗೆ ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದರು. ಅವರ ಭಾಷಣಗಳು, ಅವರ ನಿಲುವು ಸಾಹಿತ್ಯ ಪ್ರೇಮಿಗಳ ಮನಸ್ಸನಲ್ಲಿ ಸದಾ ಅಚ್ಚೊತ್ತಿರುತ್ತದೆ.

ಅವರ ಹೆಸರು ಮೊದಲು ಕೇಳಿದ್ದು ನನ್ನ ಗೆಳೆಯ ಆಲೂರು ದೊಡ್ಡನಿಂಗಪ್ಪನ ಮೂಲಕ. ಕವಿತಾಕೃಷ್ಣರು ರಚಿಸಿದ್ದ ಯಾವ ಕೊಳಲ ಗಾನ ಕೇಳಿ….ಎಂಬ ಕವಿತೆಗೆ ದೊಡ್ಡನಿಂಗಪ್ಪ ರಾಗ ಸಂಯೋಜನೆ ಮಾಡಿ ಹಾಡುತ್ತಿದ್ದ. ದೊಡ್ಡನಿಂಗಪ್ಪನಿಂದ ಪರಿಚಯವಾದ ಕವಿತಾಕೃಷ್ಣರಿಗೆ ಅದೇ ಹಾಡನ್ನು ಹಾಡುವ ಮೂಲಕ ಅವರಿಗೆ ಅಚ್ಚರಿ ಮೂಡಿಸಿದ್ದೆ.. ಕ್ಯಾನ್ಸರ್ ದೃಢಪಟ್ಟ ಸುದ್ದಿ ಗೊತ್ತಾದ ಕೂಡಲೇ ಅವರು ಅಳುಕಲಿಲ್ಲ. ಧೈರ್ಯವಾಗಿಯೇ ಇದ್ದರು. ಆರಂಭದಲ್ಲಿ ಅದೇ ತಮಾಷೆ ಮಾತುಗಳು ಇರುತ್ತಿತ್ತು. ಆದರೆ ಈ ಮೂರು ತಿಂಗಳಿನಲ್ಲಿ ಅವರು ಚೇತರಿಸಿಕೊಳ್ಳಲು ಆಗಲೇ ಇಲ್ಲ. ಅವರೊಂದಿಗಿನ ಕೊನೆಯ ಭೇಟಿಗಳು ಸದಾ ನನ್ನೊಳಗೆ ಇರುತ್ತದೆ. ಹೋಗಿ ಬನ್ನಿ ಗುರುಗಳೆ.

ಬರೆಹ – ಉಗಮ ಶ್ರೀನಿವಾಸ್, ಹಿರಿಯ ಪತ್ರಕರ್ತರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments