Friday, October 18, 2024
Google search engine
Homeಮುಖಪುಟಗಾಂಧಿ ಮುಟ್ಟಿದ ಗಿಡ ಕಾದಂಬರಿ ಕುರಿತು.....

ಗಾಂಧಿ ಮುಟ್ಟಿದ ಗಿಡ ಕಾದಂಬರಿ ಕುರಿತು…..

ಬಯಲು ಸೀಮೆ ಬದುಕಿನ ಭಾಷೆಯ ನೆಲೆಗಟ್ಟಿನಲ್ಲಿ ಭಾವಸಾಮರಸ್ಯ ಪರಿಸರ ಪ್ರಧಾನವಾಗಿ “ಗಾಂಧಿ ಮುಟ್ಟಿದ ಗಿಡ” ಕಾದಂಬರಿ ಓದಿಸಿಕೊಂಡಿತು. ಆಗಾಗ ಬಿಡುವಾದಾಗ ಮಾತಿಗೂ ಸಿಕ್ಕಿ ಎದುರು ಬದರಾದ ಕಾದಂಬರಿ. ನನ್ನ ಮೊದಲ ಓದಿಗೆ ಕಾದಂಬರಿ ದೊರೆತದ್ದೂ ಮರೆಯಲಾಗದ ಸಂಗತಿ. ಎಸ್. ಗಂಗಾಧರಯ್ಯನವರ ಮೊದಲ ಕಾದಂಬರಿಯ ಕಣಗಾಲ ಮುಂದಿನ ದಶಕಗಳ ಉದ್ದಕ್ಕೂ ಸಾಲತ್ತಿ ಸಾಗುವಳಿಯಾಗಲಿದೆ ಎಂಬ ಭರವಸೆಯೊಂದು ಅವರ ಕಾದಂಬರಿಯ ಮೊದಲ ಓದುಗನಾಗಿ ನನಗನಿಸಿದೆ.

ಗಾಂಧಿ ಚಳುವಳಿ, ವಿನೋಭಾ ಬಾವೆಯವರ ಭೂಧಾನ ಚಳುವಳಿಗಳು ನಮ್ಮ ಸುತ್ತಮುತ್ತಲಿನ ಹಳ್ಳಿಗಳನ್ನು ಮುಟ್ಟಿರಲಿಲ್ಲವೇ? ಅವರುಗಳನ್ನು ನೋಡಿದವರು, ಕಂಡು ಮಾತಾಡಿದವರ ಕುರುಹುಗಳು ನಮ್ಮ ಸುತ್ತೊಳಗೆ ಎಲ್ಲಾದರೂ ಇರಬಹುದೇ ಎಂದು ಗ್ಯಾನವಾಗುವ ಹೊತ್ತಿಗೆಲ್ಲಾ ಎಸ್. ಗಂಗಾಧರಯ್ಯನವರ ಎದೆಯೊಳಗೆ ‘ಗಾಂಧಿ ಮುಟ್ಟಿದ ಗಿಡ’ ಕಾದಂಬರಿ ಚಿಲುಮೆ ನೀರಾಗಿ ಜಲುಪಿಸಿ ಉಸಿರೊಯ್ದುಕೊಳ್ಳತೊಡಗಿತ್ತು.

ಅವರು ಕೆರೆಯೊಂದರ ದಡದಲ್ಲಿ ಕುಳಿತು ಕುಡಿಯುವ ನೀರಿಗೊಂದು ‘ಮಳಲುಬಾವಿ’ಯ ತೋಡಿ ವರತೆಯ ಹನಿ ಕಾಣುವ ಭರವಸೆಯುಳ್ಳವರಾಗಿ, ಕಣ್ಣೊಯ್ದು ನೆಲದಿಟ್ಟಿಸಿ, ಬೆರಳ ತುದಿ ನೆಲಕ್ಕೂರಿ ಕುಳಿತವರ ಹಾಗೆ ಕಾದಂಬರಿ ಬರೆಯಲು ಮುಂಬಿಡಿದು ಕುಳಿತೇ ಬಿಟ್ಟದ್ದನ್ನು ಮಾತ್ರ, ನಾನು ನಟುಗಣ್ಣಿಗೆ ಬಿದ್ದವನಾಗಿ ಗಮನಿಸುತ್ತಲೇ ಇದ್ದೆ ಕುತೂಹಲಗೊಂಡು. ಈಗ ಓದಲು ಕೈ ನೆರವಿಗೆ ಬಂದಿದೆ ಅವರ ಕಾದಂಬರಿಯ ಅಪ್ರಕಟಿತ ಪ್ರತಿ. ಫಲಭದ್ರ ಮರವಾಗಿನೆಲದ ಬಿನಿ ಉಂಡು ಕಾದಂಬಂರಿಯೊಳಗಿನ ಪಾತ್ರಗಳು ಬೆಳೆದು ನಿಂತಿವೆ.

ಎಸ್. ಗಂಗಾಧರಯ್ಯ ವಿರಚಿತ ಗಾಂಧಿ ಮುಟ್ಟಿದ ಗಿಡ ಕಾದಂಬರಿ, ದಕ್ಷಿಣೋತ್ತರವಾಗಿ, ಬುಮುಖಿಯಾಗಿ ಬೇರು ಬಿಳಿಲು ನೆಲ ಮಖನಾಗಿ ಚಾಚಿ ಬೆಳೆಯತೊಡಗುವುದು. ಗಾಂಧಿ ಮುಟ್ಟಿದ ಗಿಡ, ಗಾಂಧಿ ಮತ್ತು ವಿನೋಭಾ ಭಾವೆಯವರ ಚಳುವಳಿಗಳ ನಡೆಯನ್ನು ನಮ್ಮ ಹಾಸು ಪಾಸಿನ ಹಳ್ಳಿಗಳಿಗೂ ಎಡತಾಕಿರುವ ಕುರುತುಕೂನುಗಳನ್ನು ಎದೆ ಒಕ್ಕು ತೋರಾಕುವುದು. ಮಹಾತ್ಮರು ತಿಪಟೂರಿಗೆ ಬಂದು ಎರಡು ದಿನ ಉಳಿದು ಹೋದರೆ, ವಿನೋಬಾ ಭಾವೆಯವರು ತಿಪಟೂರಿನ ತುದಿಗಣದ ತಲೆಮಾರಿನ ಸಿದ್ದಾಪುರಕ್ಕೆ ಬಂದು ಹೋಗಿರುವ ಚರಿತ್ರೆಯನ್ನು ಕಾದಂಬರಿ ಗದ್ದಿಗಪ್ಪನ ಮೂಲಕ ಚಾರಿತ್ರಿಕ ಮಾಹಿತಿಗಳ ಜೊತೆಯಲ್ಲಿ ಹೂಡಾಕುವರು ಎಸ್. ಗಂಗಾಧರಯ್ಯ.

ಕತನಗಳ ಬಿಳುಲು, ಬೇರುಗಳಿಗೆ ಎಣೆದುಕೊಂಡ ವಿವರಗಳು ಕಾದಂಬರಿಯ ನಡ ಗಟ್ಟಿಕೊಳಿಸುವಿಕೆಗೆ ನವುರಾದ ಭಾಷೆಯನ್ನು ಕಾದಂಬರಿಕಾರ ಅಪರೂಪವಾಗಿ ದೇನಿಸಿದ್ದಾರೆ. ಅಪ್ಪ ಶಿವಣ್ಣ, ಅಜ್ಜಿ ದೊಡ್ಡಮ್ಮಜ್ಜಿ, ಸುತ್ತಲ ತತ್ವಪದಕಾರರ ನಡೆಗಳು, ಅವರ ಬದುಕಿನ ಒತ್ತಾಸೆಗಳು ಕಾದಂಬರಿಯೊಳಗೆ ಇತಿಹಾಸದ ಪುಟಗಳಾಗಿ ಒಂದೊಂದೇ ಮಡಿಕೆಯಾಗಿ ಉಳಿದು ಬೆಳೆಯುತ್ತಾ ಹೋಗುವುದು ಮತ್ತೆ ಮತ್ತೆ ಆಶ್ಚರ್ಯಕರ ಸಂಗತಿಗಳನ್ನು ಕಾದಂಬರಿಯೊಳಗೆ ಎದುರುಗೊಳ್ಳುವ ತವಕ ಉಂಟುಮಾಡದಿರಲಾರವು. ಕಾದಂಬರಿಯನ್ನು ನಿರ್ಹಿಸಿರುವ ರೀತಿಯೊಳಗೆ ಗಮನಿಸಿ ನೋಡಿದಂತೆಲ್ಲಾ, ಬಯಲು ಸೀಮೆಯ ಭಾಷೆ ಇಂಬಾಗಿ ಬಳೆಸಲಾಗಿದೆ.

ಅದಾವುದೋ ಒಂದು ವರ್ಷದ ಅಮಾಸೆಯ ಹಗಲಿನ ಉರಿಬಿಸಿಲು. ಬೆಳಕರೆದರೆ ಉಗಾದಿಗೆ ಪಾತ್ರೆಪಗಡೆಗಳು ಮೈ ತೊಳೆದುಕೊಳ್ಳುವ ‘ಮುಸುರೆಹಬ್ಬ’. ಮಾಳ್ನೆ ದಿನ ಹೊತ್ತುಟ್ಟಿದರೆ ಉಗಾದಿ. ಜೊತೆಗೆ ಉಗಾದಿ ಚಂದ್ರನ ಕಾಣುವ ವರ್ಸತಡುಕ. ಎಸ್. ಗಂಗಾಧರಯ್ಯನವರು ಬಾಯಿಲ್ಲಿ ಹೋಗಿವಂತೆ, ಗುಡ್ಡಕ್ಕೋಗೋಣ ಎಂದು ಕರೆದಿದ್ದರು. ತಡಾದೋಗಿ ಮನುಷ್ಯನ ಆ ಅಕನಾತಿ ನೋಡಲು ನಿಮಗೇನು ಹಬ್ಬದ ದಿನವೇ ಆಗಬೇಕೆ ಎಂದು ತಳ್ಳಕುವ ಯತ್ನಮಾಡತೊಡಗಿದೆ. ಉಗಾದಿ ಓಳಿಗೆಯ ಕಣಕ ತಟ್ಟಲು ಗುಡ್ಡದ ಮುತ್ತುಗದ ಎಲೆಗೆ ಮಾರು ಹೋಗಿ ಕರೆಯುತಿದ್ದಾರೆ ಎಂತಲೂವೆ ತಿಳಿದುಕೊಂಡೆ. ಅವರ ಮಾತಲ್ಲಿ ಹಬ್ಬಕ್ಕಿಂತಲೂ ಅದೇನೂ ಗಾಬರಿ ಕಂಡಂತಾಗಿತ್ತು.

ಅದೇನು ನಿಮ್ಮ ಹೊಸ ತವಕ ಗುಡ್ಡಕ್ಕೆ ಹೋಗೂದು. ಹಬ್ಬದ ಎದುರುಗೋಳ, ಹಬ್ಬ ಕಳಕಂಡು ಹೋದರಾಯಿತು ಬಿಡಿ ಎಂದು ಸುಮ್ಮನೆ ಮಾಡದ್ದೂ ಆಗಿತ್ತು. ಮಾರನೆಯ ದಿನ ಅವರು ಬೈಕ್ ಹಾಕಿಕೊಂಡು ಮನೆ ಹತ್ತಿರ ಬಂದೇ ಬಿಟ್ಟಿದ್ದರು. ಮೂಡಲ ಗುಡ್ಡಕ್ಕೆ ಬೈಕ್ ಹತ್ತಿಸಲು. ನಾನು ಅವರ ಆತಂಕ ಅರಿತವನಾಗಿಯೂ, ಹಬ್ಬಕ್ಕೆ ಅದೂ ಯಿದೂ ತಂದುಕೊಡೋದು ಬಿಟ್ಟು ಇದೇನಿದು? ಮನೇಲಿ ಕೋಮಲಕ್ಕನಿಗೆ ಹೇಳಿಬಂದೀರಾ? ಎಂದರೂ, ಮಿಸಕಾಡಲೂ ಬಿಡದೆ ಬೈಕತ್ತುವಂತೆ ಹೇಳಿ ಮೂಡಲ ಗುಡ್ಡಕ್ಕೆ ನನ್ನನ್ನೂ ನಮ್ಮಿಬ್ಬರನ್ನೂ ಹೊತ್ತ ಬೈಕನ್ನೂ ಬೆಟ್ಟದ ನೆತ್ತಿ ಹತ್ತಿಸಿದ್ದರು.

ಹೊತ್ತು ಥಣಗುಟ್ಟುವ ಹೊತ್ತಿಗೆಲ್ಲಾ ಗುಡ್ಡದ ನೆತ್ತಿ ಹತ್ತಿದ್ದೆವು. ಭೂಮಿಯೊಟ್ಟಿಗೇ ಹುಟ್ಟಿ ಆ ಹೊತ್ತಿಗೂ ಉಳಿದಿದ್ದ ಅಬ್ಬಿಗೆಯ ಗುಡ್ಡದ ನೆತ್ತಿ ಹೊಡೆದು ನೆತ್ತರು ಕುಡಿಯುತ್ತಾ, ಬೆಟ್ಟದ ತಾಯಂದಿರ ಮಾಂಸ ಕಂಡಗಳಿಗೆ ಬಾಯಾಕಿದ್ದ ಬಾರಿ ಯಂತ್ರಗಳು ಆಗಲೇ ಗುಡ್ಡಗಳ ಯಲಕ ಇರಿಯುತಿದ್ದವು ಅವುಗಳ ಕುದುರುಗಾಲಾಕಿ. ಅಡವಿ ಗ್ವಾಮಾಳೆ ಸರ ಹಾಯ್ದು, ಗುಂಡಿಗೆ ತಡಾಯ್ದು, ಆಳದಲ್ಲಿ ಬೆಟ್ಟಗಳ ಹೊಟ್ಟೆ ಗೂರಾಡುವ ಇಟಾಚಿಗಳ ಬಾರಿ ಉಗುರುಗಳು. ನೋಡಿ ಭಯಗೊಂಡ ಪರಿಸ್ಥತಿ. ಈ ಭಯದ ವಾತಾವರಣಕ್ಕೇಕೆ ಕರೆದುಕೊಂಡು ಬಂದಿರಿ? ಗೊತ್ತಲ್ಲಾ, ಎಂದರೆ, ಅದೇನೋ ಮೌನ ಆವರಿಸಿ, ಮಾತೇ ನಿಂತಂತಾಗಿ, ಜೀವ ಬಾಯಿಗೆ ತಂದುಕೊಂಡವರಂತೆ ಆತಂಕಗೊಂಡು, ಹಿಂದಾಕಿಕೊಂಡು ಹೋಗಿದ್ದ ನನ್ನ ಜೊತೆಯಲ್ಲೂ ಐರಾರು ಗಂಟೆಗಳ ಇದ್ದು ಧೂಳೊಯ್ದುಕೊಂಡು ಮಾತನಾಡದೆ ಹಿಂತೆರುಗಿದ್ದರು.

ಸತ್ತಷ್ಟು ಸಾವಾಗಿರುವ ಈ ಜೀವವೈವಿಧ್ಯತೆ ಸಾವಿಗೆ ಒಂದು ಸಾಕ್ಷಿಯಾಗಿ ನಿಲ್ಲುವ ಕಾದಂಬರಿಯನ್ನಾದರೂ ಬರೆಯಿರಿ ಎಂದು ಆ ವೊತ್ತಿಗೂ ಈ ವೊತ್ತಿಗೂ ಗುಡ್ಡಗಳ ಕಡೆ ಮಖ ಮಾಡಿದಾಗಲೆಲ್ಲಾ ಎಸ್. ಗಂಗಾಧರಯ್ಯನವರೊಂದಿಗೆ ಮಾತಾಡುತ್ತಲೇ ಇರುವೆನು; ಕಳೆದು ಹೋದ ನಮ್ಮ ಪಾಸಲೆಯ ಆ ಸಾಂಸ್ಕೃತಿಕ ಬೇರುಗಳ ನೆನೆದಾಗಲೆಲ್ಲಾ.

ಕರೆಗಟ್ಟಿದ ಅವುಗಳ ಕಲಿಮೆಗಳು ಮಾತ್ರ ಉಳಿಯುವ ಈ ಕಾಲಸ್ಥತಿಯೊಳಗೆ ಎಸ್. ಗಂಗಾಧರಯ್ಯನವರ ಎದೆಯೊಳಗೆ ಗಾಂಧಿ ಮಹಾತ್ಮರು ಮತ್ತು ವಿನೋಭಾ ಬಾವೆಯವರು ಕಾದಂಬರಿಯಾಗಿ ಬಾವಿಸತೊಡಗಿದ್ದಾರೆ. ಮುಂದೆ ನನ್ನ ಒತ್ತಾಸೆಗೂ ಒಂದು ಕಾದಂಬರಿಯನ್ನು ಗಂಗಾಧರಯ್ಯನವರು ಬರೆಯಬಹುದೇನೋ? ಇನ್ನೇನು ಮುಂದಿನ ತಿಂಗಳ ಕೊನೆ ದಿನದ ಹೊತ್ತಿಗೆಲ್ಲಾ ಕಾದಂಬರಿ ‘ಗಾಂಧಿ ಮುಟ್ಟಿದ ಗಿಡ’ ಮುದ್ರಣವಾಗಬಹುದೇನೋ? ಉಗಾದಿಯ ಹೊಸ ದಿನಗಳ ತುದಿಹೊತ್ತು ಬಂದಂತೆಲ್ಲಾ…….

ಲೇಖಕರು – ಉಜ್ಜಜ್ಜಿ ರಾಜಣ್ಣ, ತಿಪಟೂರು. 10-02-2024

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular