Sunday, September 8, 2024
Google search engine
Homeಚಳುವಳಿಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಫೆಬ್ರವರಿ 15ರಂದು ತುಮಕೂರು ಬಂದ್

ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಫೆಬ್ರವರಿ 15ರಂದು ತುಮಕೂರು ಬಂದ್

ತುಮಕೂರು ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಫೆಬ್ರವರಿ 15ರಂದು ತುಮಕೂರು ನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ರೈತ ಹೋರಾಟಗಾರ ಹಾಗೂ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹೇಳಿದ್ದಾರೆ.

ಅಂದು ಟೌನ್‌ಹಾಲ್ ವೃತ್ತದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶಕೊಂಡು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ 33 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲವ್ಯಕ್ತಪಡಿಸಿ ಮಾತನಾಡಿದ ಅವರು, ರಾಜ್ಯದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕು. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಬಂದ್ ಮಾಡಿ ಕೊಬ್ಬರಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಫೆಡ್ ಮೂಲಕ ಆರಂಭಿಸಲಾಗಿರುವ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗೋಲ್‌ಮಾಲ್ ನಡೆದಿದ್ದು, ಕೊಬ್ಬರಿ ಬೆಳೆಗಾರರಿಗೆ ಮೋಸವಾಗಿದೆ. ಕೂಡಲೇ ಪಾರದರ್ಶಕವಾಗಿ ಮತ್ತೆ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿದರು.

ತುಮಕೂರು ರಾಜ್ಯದಲ್ಲೇ ಅತಿ ಹೆಚ್ಚು ಕೊಬ್ಬರಿ ಬೆಳೆಗಾರರು ಇರುವ ಜಿಲ್ಲೆ. ಆದರೆ ನಮ್ಮ ಜಿಲ್ಲೆಯಲ್ಲೇ ಕೇವಲ 5 ದಿನ ಮಾತ್ರ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿ 62,500 ಮೆಟ್ರಿಕ್ ಟನ್ ನೋಂದಣಿ ಗುರಿ ಮುಟ್ಟಿದ್ದೇವೆ ಎಂದು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರೈತರ ನೋಂದಣಿಯಾಗಿದೆ. ರಾತ್ರೋರಾತ್ರಿ ಮನೆಗಳಿಗೆ ಹೋಗಿ ನೋಂದಣಿ ಮಾಡಿಸುವ ಅವಶ್ಯಕತೆ ಏನಿತ್ತು. ಇದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಫೆಡ್ ಮಂಡಳಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ ಇದಲ್ಲಿ ಗೋಲ್‌ಮಾಲ್ ನಡೆದಿದೆ. ವರ್ತಕರು, ಪಟ್ಟಭದ್ರರ ಹಿಡಿತದಲ್ಲಿ ನಫೆ ಇದೆ ಎಂದು ದೂರಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ 62,500 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ನೋಂದಣಿ ಗುರಿ ಸಾಕಾಗುವುದಿಲ್ಲ. ಇದನ್ನು 1.50 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸಿ ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಬೇಕು. ಅಲ್ಲದೆ ಕೊಬ್ಬರಿ ಗುಣಮಟ್ಟದಲ್ಲಿ 75 ಎಂ.ಎಂ. ನಿಗದಿಪಡಿಸಲಾಗಿದೆ. ಪ್ರಸ್ತುತ ಬರಗಾಲ ಆವರಿಸಿರುವುದರಿಂದ ನೀರಿಲ್ಲದೆ, ಅನೇಕ ರೋಗಗಳಿಗೆ ತೆಂಗಿನ ಮರಗಳು ತುತ್ತಾಗಿವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ನಫೆಡ್ ನಿಗದಿಪಡಿಸಿರುವ 75 ಎಂ.ಎಂ. ಕೊಬ್ಬರಿ ಸಿಗುವುದೇ ದುಸ್ತರ. ಇದನ್ನು 40-50 ಎಂ.ಎಂಗೆ ನಿಗದಿಗೊಳಿಸಿ ತಮಿಳುನಾಡು ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಕೊಬ್ಬರಿಯನ್ನು ಖರೀದಿಸಬೇಕು ಎಂದು ಅವರು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ, ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ 3 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು. ನಫೆಡ್ ಖರೀದಿ ನೋಂದಣಿಯಲ್ಲಿ ನಿಜವಾದ ತೆಂಗು ಬೆಳೆಗಾರರಿಗೆ ಮೋಸ ಆಗಿದೆ. ಇದರಲ್ಲಿ ಜಿಲ್ಲೆಯ ರೈತರಿಗೆ ಮೋಸವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವರ್ತಕರು, ಅಧಿಕಾರಿಗಳು, ದಳ್ಳಾಳಿಗಳು ಶಾಮೀಲಾಗಿ ಷಡ್ಯಂತ್ರ ರೂಪಿಸಿ ಕೇವಲ 4 ದಿನದಲ್ಲಿ ನಫೆಡ್ ಖರೀದಿ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15 ರಂದು ಕರೆ ನೀಡಿರುವ ತುಮಕೂರು ನಗರ ಬಂದ್‌ನಲ್ಲಿ ಜಿಲ್ಲೆಯ ಎಲ್ಲಾ ರೈತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಸಂಪಿಗೆ ಕೀರ್ತಿ, ತುರುವೇಕೆರೆ ನಾಗೇಂದ್ರ, ತಿಪಟೂರು ರಾಜಣ್ಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular