Friday, November 22, 2024
Google search engine
Homeಮುಖಪುಟನಡೆ-ನುಡಿ ಒಂದಾಗಿಸಿಕೊಂಡು ಕೆಲಸ ಮಾಡುತ್ತಿರುವ ಸರ್ಕಾರ - ರಾಜ್ಯಪಾಲ

ನಡೆ-ನುಡಿ ಒಂದಾಗಿಸಿಕೊಂಡು ಕೆಲಸ ಮಾಡುತ್ತಿರುವ ಸರ್ಕಾರ – ರಾಜ್ಯಪಾಲ

ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಹೊಸ ಕನಸು ಹೊತ್ತು ಜನರ ಮುಂದೆ ಹೋಗಿ ಅವರ ಬೆಂಬಲ, ಮನ್ನಣೆ ಮತ್ತು ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದ ನನ್ನ ಸರ್ಕಾರವು ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನದ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಟ್ಟ ಮಾತನ್ನು ಪಾಲಿಸಬೇಕೆ ನ್ನುವುದು ನಮ್ಮ ವಚನಕಾರರ ನಿಲುವು. ಹಾಗಾದಾಗಲೇ ಮಾತಿಗೆ ಬೆಲೆ. ಹೇಳುವ ಮಾತಿಗೆ ಬೆಲೆ ನೀಡದೆ, ಭರವಸೆಗಳನ್ನೇ ಅವಹೇಳನ ಮಾಡುವ ರಾಜಕೀಯ ವಾತಾವರಣವೆ ಎಲ್ಲೆಡೆ ತುಂಬಿರುವಾಗ ನನ್ನ ಸರ್ಕಾರವು ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ. ನನ್ನ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ವಚನಗಳನ್ನು ಪಾಲಿಸಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ. ಜನರ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಿದೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ಸಂತಸದ, ನೆಮ್ಮದಿಯ, ಸಂತೃಪ್ತಿಯ ಹೊಸ ಮನ್ವಂತರಕ್ಕೆ ಚಾಲನೆ ದೊರೆತಿದೆ ಎಂದರು.

ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅದನ್ನು ಕಡಿಮೆ ಮಾಡುತ್ತಾ ಆರ್ಥಿಕವಾಗಿ ಮುನ್ನಡೆ ಸಾಧಿಸುವ ಅಭಿವೃದ್ಧಿ ಪಥವನ್ನು ಕರ್ನಾಟಕವು ಅನುಸರಿಸುತ್ತಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯತೆಗಳು ಕೂಡ ಅದರಲ್ಲಿ ಸೇರಿವೆ. ಈ ಆಯಾಮಗಳುಳ್ಳ ಕರ್ನಾಟಕ ಮಾದರಿಯನ್ನು ನನ್ನ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಈ ಮಾದರಿಯನ್ನು ಇನ್ನಷ್ಟು ಸಶಕ್ತಗೊಳಿಸಿ ಕರ್ನಾಟಕ ರಾಜ್ಯವನ್ನು ಇಡೀ ದೇಶದಲ್ಲೇ ವಿಶಿಷ್ಟವಾಗಿ ರೂಪಿಸುವುದು ನನ್ನ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ. ಈ ಯೋಜನೆಗಳು ಆರ್ಥಿಕವಾಗಿ ಅಶಕ್ತರಾದವರಿಗೆ ಎಷ್ಟೊಂದು ಅಗತ್ಯವಿತ್ತು ಎನ್ನುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಹರಿದು ಬಂದ ಅರ್ಜಿಗಳೇ ಸಾಕ್ಷಿ. ಈ ಯೋಜನೆಗಳ ಸಮರ್ಪಕ ಅನುಷ್ಠಾನವನ್ನು ಆದ್ಯತೆಯನ್ನಾಗಿ ಪರಿಗಣಿಸಿರುವ ನನ್ನ ಸರ್ಕಾರ ಇದಕ್ಕೊಂದು ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಿದೆ. ಆದರೆ, ಆರ್ಥಿಕ ಅಸಮಾನತೆಯಿಂದಾಗಿ ಅಶಕ್ತರಾಗಿ ಉಳಿದಿರುವ ಜನತೆಯ ಬದುಕಿಗೆ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ ಎಂದರು.

ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವ ರೀತಿಯ ಅಭಿವೃದ್ಧಿಯನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅಶಕ್ತರಾಗಿ ಉಳಿದಿರುವ ಜನಸಮೂಹವನ್ನು ಇಡೀ ಆರ್ಥಿಕ ಬೆಳವಣಿಗೆಯಲ್ಲಿ ಭಾಗೀದಾರರನ್ನಾಗಿ ಮಾಡುವ ಅವಶ್ಯಕತೆಯಿದೆ. ಅಭಿವೃದ್ಧಿಯ ಫಲವು ಸಹಜವಾಗಿಯೇ ಎಲ್ಲರಿಗೂ ಲಭಿಸುವ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ನಿರೂಪಿಸಲು ನನ್ನ ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳು ಈ ನಿಟ್ಟಿನಲ್ಲಿ ಒಂದು ಆರಂಭ ಅಷ್ಟೇ ಎಂದು ತಿಳಿಸಿದರು.

ನನ್ನ ಸರ್ಕಾರವು ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಹೇಳಿದರು.

ನನ್ನ ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ನನ್ನ ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ ಎಂದರು.

ನನ್ನ ಸರ್ಕಾರವು ಖಾತರಿ ಯೋಜನೆಗಳ ಮೂಲಕ ಜನರ ಜೀವನದಲ್ಲಿ ಪರೋಕ್ಷವಾಗಿ ಗಮನಾರ್ಹ ಬದಲಾವಣೆಗಳನ್ನು ಗಮನಿಸುತ್ತಿದೆ. ರಾಜ್ಯದಲ್ಲಿ ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ನಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬ ನಂಬಿಕೆಯೊಂದಿಗೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular