ತುಮಕೂರು ಜಿಲ್ಲೆಯ ಕುಣಿಗಲ್ ಕುದುರೆ ಪಾರಂ ನಮ್ಮ ತುಮಕೂರಿನ ಹೆಮ್ಮೆಯ ತಾಣ. ಅರಬ್ ಕುದುರೆಗಳನ್ನು ತಂದು ಪಳಗಿಸುವುದರಿಂದ ಆರಂಭವಾದ ಈ ಕುದುರೆ ಪಾರಂ ಟೀಪುವಿನ ದೂರದೃಷ್ಟಿಯನ್ನು ಈ ಕಾಲದಲ್ಲೂ ಕಾಣಿಸುತ್ತದೆ. ಇದು ನಮ್ಮ ನೆಲದ ಅಸ್ಮಿತೆ. ಉಳಿಸಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ.
ಕುದುರೆ ಪಾರಂ ನೋಡಬೇಕೆಂದುಕೊಂಡರೂ ಹೋಗಲು ಸಮಯ ಕೂಡಿ ಬಂದಿರಲಿಲ್ಲ. ಹೋರಾಟದ ಸಂಗಾತಿ ಜಿ.ಕೆ.ನಾಗಣ್ಣ ಅವರೊಂದಿಗೆ ಕತೆಗಾರ ಮಿತ್ರ ಗುರುಪ್ರಸಾದ್ ಕಂಟಲಗೆರೆ, ಪ್ರೊ.ನರಸಿಂಹರಾಜು ರವರೊಂದಿಗೆ ಭೇಟಿ ಕೊಟ್ಟೆವು.
ಯಾರದೋ ಹಿತಾಸಕ್ತಿಗೆ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಯಿರುವ ಈ ಪಾರಂ ಖಾಸಗಿಯವರ ವಶವಾಗುತ್ತಿರುವ ಹುನ್ನಾರ ಕೇಳಿ ಆತಂಕವಾಗಿತ್ತು. ಮನುಷ್ಯರ ದುರಾಸೆಗಳಿಗೆ ಪರಂಪರೆ, ಸಂಸ್ಕೃತಿ, ಅಸ್ಮಿತೆ ಯಾವುದು ಅರಿವಾಗದು.
ಈ ಕಬಳಿಸುವ ಸುದ್ದಿಯಿಂದ ಅಲ್ಲಿ ಕೆಲಸ ಮಾಡುವ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಮಂದಿ ನಡುಗಿಹೋಗಿದ್ದಾರೆ. ಕುದುರೆಗಳನ್ನು ಮಕ್ಕಳಂತೆ ಸಾಕುತ್ತಿರುವ ಇವರ ಮಾತುಗಳು “ನನ್ನ ತಾತನ ಕಾಲದಿಂದಲೂ ಈ ಕುದುರೆಗಳನ್ನು ನಂಬಿಕೊಂಡೇ ಜೀವನ ಮಾಡುತ್ತಿದ್ದೇವೆ.”
ಸ್ವಲ್ಪ ಹಿರಿಯರಂತೂ ” ಕುದುರೆ ನೋಡಿಕೊಳ್ಳುವ ಕೆಲಸದಿಂದ ಮನೆ ನಡೆಸುತ್ತಿದ್ದೇವೆ. ಒಮ್ಮೆಲೆ ನಮ್ಮನ್ನು ಈ ಕೆಲಸದಿಂದ ತೆಗೆದರೆ ಕುದುರೆ ನೋಡಿಕೊಳ್ಳೋದು ಬಿಟ್ಟು ನಮಗೆ ಬೇರೇನೂ ಬರಲ್ಲ. ಎಲ್ಲಿಗೆ ಹೋಗೋದು? ಏನು ಮಾಡೋದು? ” ಅವರ ಕಣ್ಣಂಚಿನ ನೀರು ಮನವನ್ನೇ ಕಲಕಿಬಿಟ್ಟಿತು. ಸುಮಾರು ಇನ್ನೂರೈವತ್ತು ಕುದುರೆಗಳು ಇಲ್ಲಿವೆ. ಮೂರು ಸ್ಟಾಲಿನ್ (ಗಂಡುಕುದುರೆ)ಗಳಿವೆ. ಕುದುರೆ ಜೀವನಕ್ರಮ ನಾನ್ನೂರ ಇಪ್ಪತ್ತು ಎಕರೆಯಲ್ಲಿ ಹಾಸು ಹೊದ್ದಿದೆ. ಮಲ್ಯ ಮೂವತ್ತು ವರುಷಗಳ ಅಗ್ರಿಮೆಂಟ್ ಮುಗಿದು ಈಗ ನೆನೆಗುದಿಗೆ ಬಿದ್ದಿದೆಯಂತೆ.
ಇಂಥ ಪಾರಂಪರಿಕ ಜೀವತಾಣಗಳಿರುವ ಈ ನೆಲವನ್ನು ಖಾಸಗಿಯವರಿಗೆ ಕೊಡುವುದಕ್ಕಿಂತ ಸರ್ಕಾರವೇ ಪಾರಂಪರಿಕ ತಾಣವೆಂದು ಘೋಷಿಸಿ ಕಾಪಾಡುವುದು ಉತ್ತಮವೆನಿಸುತ್ತದೆ. ಜೊತೆಗೆ ಅತ್ಯುತ್ತಮ ಪ್ರವಾಸಿ ತಾಣವಾಗಿಯೂ ರೂಪಿಸಬಹುದು.
ಕುದುರೆ ಕುರಿತಾದ ಇರುವ ಏಕೈಕ ಪಾರಂ ಅನ್ನು ಉಳಿಸುವ ಜವಾಬ್ದಾರಿ ನಮ್ಮನಿಮ್ಮೆಲ್ಲರದಾಗಬೇಕು. ಇದರ ಉಳಿಸುವಿಕೆಗೆ ಹೋರಾಟ ರೂಪಿಸಿ, ಮುನ್ನಡೆಸುತ್ತಿರುವ ಸಂಗಾತಿ ಜಿ.ಕೆ ನಾಗಣ್ಣಗೆ ಅಭಿನಂದನೆಗಳು. ಜೊತೆಗಿರುವ ಸಂಗಾತಿಗಳಿಗೆ ನಮನಗಳು. ಈ ಹೋರಾಟದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಈ ತಾಣವನ್ನು ಕಾರ್ಪೋರೇಟ್ ಗಳಿಂದ ಕಾಪಾಡೋಣ.
ಬರೆಹ: ಡಾ.ರವಿಕುಮಾರ್ ನೀಹ