ರಾಜ್ಯ ಸರ್ಕಾರ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಮತ್ತು ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದ ಹಿರಿಯ ಲೇಖಕ ರಂಜಾನ್ ದರ್ಗಾ, ಡಾ.ಅಗ್ರಹಾರ ಕೃಷ್ಣಮೂರ್ತಿ, ತುಂಬಾಡಿ ರಾಮಣ್ಣ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತುಮಕೂರು ಜಿಲ್ಲೆಯ ಹಿರಿಯ ಕಥೆಗಾರ ಜಿ.ವಿ.ಆನಂದಮೂರ್ತಿ ಅವರ ಗುಣಸಾಗರಿ ಕಥಾಸಂಕಲನಕ್ಕೆ ಪುಸ್ತಕ ಪ್ರಶಸ್ತಿ ಲಭಿಸಿದೆ.
ಕೊರಟಗೆರೆ ತಾಲ್ಲೂಕು ವಡ್ಡಗೆರೆಯ ಕದರಮ್ಮ ಅವರಿಗೆ ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಪುಸ್ತಕ ಬಹುಮಾನ ವಿಜೇತರು
2021ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದೆ ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರ ನೀಡಲು ಈ ಕೆಳಕಂಡವರನ್ನು ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾವ್ಯ ಪ್ರಕಾರದಲ್ಲಿ ಚೇಮನಹಳ್ಳಿ ರಮೇಶ್ ಬಾಬು, ನವಕವಿಗಳ ಪ್ರಥಮ ಸಂಕಲನ ಪ್ರಕಾರದಲ್ಲಿ ಡಾ.ಶೈಲೇಶ್ ಕುಮಾರ್ ಅವರ ರಾಗಿ ಕಾಳು, ಕಾದಂಬರಿ ಪ್ರಕಾರದಲ್ಲಿ ಡಾ.ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ, ಸಣ್ಣಕತೆಯಲ್ಲಿ ಜಿ.ವಿ.ಆನಂದಮೂರ್ತಿಯವರ ಗುಣಸಾಗರಿ ಮತ್ತು ಇತರ ಕತೆಗಳು, ನಾಟಕ ಪ್ರಕಾರದಲ್ಲಿ ಬಿ.ಆರ್.ಪೊಲೀಸ್ ಪಾಟೀಲ್ ಅವರ ಮಹಾ ಮಹಿಮೆ ಎಡೆಯೂರು ಸಿದ್ದಲಿಂಗ ಶಿವಯೋಗಿ ಕೃತಿಗಳು ಪುಸ್ತಕ ಬಹುಮಾನ ಪಡೆದಿವೆ.
ಅಲ್ಲದೆ ಲಲಿತ ಪ್ರಬಂಧ ಪ್ರಕಾರದಲ್ಲಿ ಬಿ.ವಿ.ಭಾರತಿ ಅವರ ಎಲ್ಲಿಂದಲೋ ಬಂದವರು, ಪ್ರವಾಸ ಸಾಹಿತ್ಯ ಪ್ರಕಾರದಲ್ಲಿ ಡಾ.ಎಸ್.ಪಿ.ಪದ್ಮಪ್ರಸಾದ್ ಅವರ ಬುದ್ದ ಭಕ್ತರ ನಾಡಿನಲ್ಲಿ, ಜೀವನ ಚರಿತ್ರೆ/ಆತ್ಮಕಥೆ ಪ್ರಕಾರದಲ್ಲಿ ಡಾ.ಡೊಮಿನಿಕ್ ಡಿ ಅವರ ಅಕ್ಕಯ್, ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ಡಾ.ಎಚ್.ಎಸ್.ಸತ್ಯನಾರಾಯಣ ಅವರ ಕಣ್ಣೋಟ, ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ಅವರ ವಜ್ರದ ಕಿರೀಟ ಕೃತಿಗಳು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.
ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ಡಾ.ಕಿರಣ್ ವಿ.ಎಸ್ ಅವರ ಸೆರೆಂಡಿಪಿಟಿ ವೈದ್ಯಲೋಕದ ಅದ್ಬುತ ಆಕಸ್ಮಿಕಗಳು, ಮಾನವಿಕ ಪ್ರಕಾರದಲ್ಲಿ ಡಾ.ಕೆ.ಎಸ್.ನಾಗರಾಜ ಅವರ ಸಂಕೇತ ವ್ಯಾಕರಣ ಮತ್ತು ಪದಕೋಶ, ಸಂಶೋಧನೆ ಪ್ರಕಾರದಲ್ಲಿ ಡಾ.ಎ.ಎಸ್.ಪ್ರಭಾಕರ ಅವರ ಚಹರೆಗಳೆಂದರೆ ಗಾಯಗಳೂ ಹೌದು, ಅನುವಾದ-1(ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ) ಪ್ರಕಾರದಲ್ಲಿ ದಾದಾಪೀರ್ ಜೈಮನ್ ಅವರ ಪರ್ದಾ ಮತ್ತು ಪಾಲಿಗಾಮಿ, ಅಂಕಣ ಬರಹ/ವೈಚಾರಿಕ ಬರಹ ಪ್ರಕಾರದಲ್ಲಿ ಮುಜಫರ್ ಅಸಾಧಿ ಅವರ ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ, ಸಂಕೀರ್ಣ ಪ್ರಕಾರದಲ್ಲಿ ಡಾ.ಜಿ.ಕೃಷ್ಣಪ್ಪ ಅವರ ವಚನ ದೀಪಿಕೆ, ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದಲ್ಲಿ ಯಶಸ್ವಿನಿ ಕದ್ರಿ ಅವರ ಊರು ಹೇಳದ ಕಥೆ ಕೃತಿಗಳು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.