ಎಲ್ಲಾ ನೇಮಕಾತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರ ಮೂಲಕವೇ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳು ತುಮಕೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮನವಿ ಸಲ್ಲಿಸಿ ಮಾತನಾಡಿದ ಲವ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳನ್ನು ಎಸ್.ಎಸ್.ಎಲ್.ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 21ರಿಂದ ನವಂಬರ್ 20ರವರೆಗೆ ನಿಗದಿಗೊಳಿಸಲಾಗಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೊರತುಪಡಿಸಿ ಅಂಕಗಳ ಆಧಾರದ ನೇಮಕಾತಿಯು ಎಲ್ಲಾ ಹುದ್ದೆ ಆಕಾಂಕ್ಷಿಗಳಿಗೂ ನ್ಯಾಯ ಒದಗಿಸುವ ಕ್ರಮವಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ, ಪ್ರಸ್ತುತ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಲ್ಲದ ಮತ್ತು ಪ್ರಾಮಾಣಿಕವಲ್ಲದ ನೇಮಕಾತಿ ಪ್ರಕ್ರಿಯೆಯು ನಿರುದ್ಯೋಗಿಗಳಲ್ಲಿ ಮತ್ತಷ್ಟು ಆಕ್ರೋಶವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಅಂಕಗಳ ಆಧಾರದ ಮೇಲಿನ ನೇಮಕಾತಿ ಪ್ರಕ್ರಿಯೆಯಿಂದ ಕರೋನ ನಂತರದ ವರ್ಷಗಳಲ್ಲಿನ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಏಕೆಂದರೆ, ಕರೋನ ನಂತರದ ವರ್ಷಗಳಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಇದರಿಂದ ಕರೋನ ಪೂರ್ವ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಅಭ್ಯರ್ಥಿಗಳಿಗೆ ಮತ್ತು ಈಗಾಗಲೇ ಇದೇ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಜೊತೆಗೆ ನಮ್ಮ ನೆರೆಹೊರೆ ರಾಜ್ಯಗಳಲ್ಲಿಯೂ ಕೂಡ ಇದೇ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಮಾಡಲಾಗುತ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಕೂಡ ಇದೇ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾಗರಾಜ, ರವೀಶ, ಗೋಪಾಲಕೃಷ್ಣ, ದಯಾನಂದ, ಪ್ರಜ್ವಲ್, ಸಂತೋಷ್, ಶಶಿ, ಗಿರಿ, ಬಾಲರಾಜು ಇದ್ದರು. ಇದೇ ವೇಳೆ ಡಿಸಿಗೆ ಮನವಿಪತ್ರ ಸಲ್ಲಿಸಲಾಯಿತು.